ಇಂದೋರ್: ಟೀಂ ಇಂಡಿಯಾ ಮತ್ತು ಅಫ್ಘಾನಿಸ್ತಾನ (Ind vs Afg) ನಡುವಿನ 2ನೇ ಟಿ20 ಪಂದ್ಯದ ವೇಳೆ ಇಂದೋರ್ನ ಹೋಳ್ಕರ್ ಮೈದಾನದಲ್ಲಿ ಭದ್ರತೆ ಉಲ್ಲಂಘಿಸಿದ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅವರ ಅಪ್ಪಟ ಅಭಿಮಾನಿಗೆ ಸಂಕಷ್ಟ ಎದುರಾಗಿದೆ.
ಟಿಕೆಟ್ ಖರೀದಿಸಿ ಪಂದ್ಯ ವೀಕ್ಷಿಸಲು ಬಂದಿದ್ದ ಯುವಕ ನರೇಂದ್ರ ಹಿರ್ವಾನಿ ಗೇಟ್ ಮೂಲಕ ಮೈದಾನಕ್ಕೆ ನುಗ್ಗಿದ್ದಾನೆ. ಯುವಕನು ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿದ್ದು, ಹಿರಿಯ ಆಟಗಾರನನ್ನು ಭೇಟಿಯಾಗಬೇಕೆಂಬ ಆಸೆಯಿಂದ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಮೈದಾನ ಪ್ರವೇಶಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಯುವಕನ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ಮುಗಿದ ಬಳಿಕ ಬಳಿಕ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಭಾರತಕ್ಕೆ ಸರಣಿ ಜಯ: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿರುವ ಭಾರತ, ತವರಿನಲ್ಲೇ ವೈಟ್ವಾಶ್ ಮಾಡುವ ಗುರಿ ಹೊಂದಿದೆ. ಭಾನುವಾರ ಇಂದೋರ್ನ ಹೋಳ್ಕರ್ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.