2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಇಂದು ಟೀಮ್ ಇಂಡಿಯಾ, ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಹೇಗಾದ್ರೂ ಮಾಡಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಹಳೆಯ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ಮುಂದಾಗಿದೆ.
ಈ ಹಿಂದೆ ಹಲವು ಬಾರಿ ಐಸಿಸಿ ಮೆಗಾ ಟೂರ್ನಿ ಫೈನಲ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಮುಖಾಮುಖಿ ಆಗಿವೆ. ಕಳೆದ ಎರಡು ಸಲ ಐಸಿಸಿ ಟೂರ್ನಿಗಳಲ್ಲಿ ಉಭಯ ತಂಡಗಳು ಸೆಣಸಾಡಿದ್ದವು. ಆ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ.
ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸೋತಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 469 ರನ್ ಕಲೆ ಹಾಕಿತು. ಇದಾದ ಬಳಿಕ ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 296 ರನ್ಗಳಿಗೆ ಆಲೌಟ್ ಆಗಿತ್ತು. 2ನೇ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 8 ವಿಕೆಟ್ಗೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆಸ್ಟ್ರೇಲಿಯಾ ನೀಡಿದ ಬೃಹತ್ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 2ನೇ ಇನ್ನಿಂಗ್ಸ್ನಲ್ಲಿ 234 ರನ್ಗೆ ಆಲೌಟ್ ಆಗಿ ಸೋತಿದೆ. ಒಮ್ಮೆ ಏಕದಿನ ವಿಶ್ವಕಪ್ ಫೈನಲ್ನಲ್ಲೂ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು.
ಇನ್ನು, ಈ ಎರಡು ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ಪ್ಲಾನ್ ಮಾಡಿಕೊಂಡಿದೆ. ಇಷ್ಟೇ ಅಲ್ಲ ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಮಣ್ಣು ಮುಕ್ಕಿಸಲು ಸುವರ್ಣಾವಕಾಶ ಇದಾಗಿದೆ.
ಇನ್ನೂ ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ಒಬ್ಬ ಆಟಗಾರನ ಮೇಲೆ ಅವಲಂಬಿತವಾಗದೆ ತಂಡವಾಗಿ ಸಾಂಘಿಕ ಪ್ರದರ್ಶನ ನೀಡುತ್ತಿದ್ದು ಒತ್ತಡವನ್ನು ನಿಭಾಯಿಸಿ ಪಂದ್ಯಗಳನ್ನು ಗೆಲ್ಲಲು ಯಶಸ್ವಿಯಾಗಿದೆ.
ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಪವರ್ ಪ್ಲೇನಲ್ಲಿ ವೇಗಿಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಹೆಣಗಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪವರ್ಪ್ಲೇನಲ್ಲಿ ಮೊಹಮ್ಮದ್ ಶಮಿ ಎರಡು ವಿಕೆಟ್ ಪಡೆದರು, ಪಂದ್ಯದಲ್ಲಿ ಐದು ವಿಕೆಟ್ ಪಡೆದು ಮಿಂಚಿದರು. ಆದರೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಫಿಟ್ನೆಸ್ ಸಮಸ್ಯೆ ಕೂಡ ಅವರನ್ನು ಕಾಡುತ್ತಿದೆ.
ಒಟ್ಟಾರೆ ಇಂದಿನ ಪಂದ್ಯದಲ್ಲಿ ಬಲಿಷ್ಠ ತಂಡವೇ ಸೆಣಸಾಟ ನಡೆಸಲಿದ್ದು, ಗೆಲುವು ಯಾರದ್ದು ಎಂಬುವುದನ್ನು ಕಾದು ನೋಡಬೇಕಾಗಿದೆ.