ಮಂಗಳೂರು:- ಕರ್ನಾಟಕದಲ್ಲಿ ನಕ್ಸಲರ ಶರಣಾಗತಿ ಬಗ್ಗೆ ತಮಿಳಿನ ಬಿಜೆಪಿ ಮುಖಂಡ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, 6 ಮಂದಿ ನಕ್ಸಲರ ಶರಣಾಗತಿಯ ಕುರಿತು ಸರ್ಕಾರ ನಡೆದುಕೊಂಡ ರೀತಿ ಹಾಗೂ ನಾಯಕ ವಿಕ್ರಂಗೌಡ ಎನ್ಕೌಂಟರ್ ಕೂಡ ಸಂಶಯ ಮೂಡಿಸುತ್ತಿದೆ. ಈ ಹಿಂದೆ ನಾನು ಚಿಕ್ಕಮಗಳೂರು ಎಸ್ಪಿ ಆಗಿದ್ದ ಸಂದರ್ಭದಲ್ಲಿ ನಕ್ಸಲರು ಶರಣಾಗಿದ್ದರು. ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ನಾನು ಭಾಗವಹಿಸಿದ್ದೆ. ನಿಯಮಗಳ ಪ್ರಕಾರ ಜಿಲ್ಲಾಧಿಕಾರಿ ಮತ್ತು ಎಸ್ಪಿ ಎದುರು ನಕ್ಸಲರು ಶರಣಾಗಬೇಕು. ಆನಂತರ ಬೇರೆ ಪ್ರಕ್ರಿಯೆಗಳು ನಡೆಯುತ್ತದೆ. ಇಲ್ಲಿ ರಾಜಕೀಯ ಮೈಲೇಜ್ಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ ಎಂದರು.
ನಕ್ಸಲ್ ಬೆಂಬಲಿಗರು ಸರ್ಕಾರದ ಮೇಲೆ ಹಾಗೂ ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರಲಿದ್ದಾರೆ. ನಕ್ಸಲರು ಶರಣಾದಾಗ ಜನರಿಗೆ ವಿಶ್ವಾಸ ಬರಬೇಕು. ಆದರೆ ಜನರಿಗೆ ವಿಶ್ವಾಸವಿಲ್ಲ. ಶರಣಾಗತಿಯ ಬಗ್ಗೆ ಗೃಹ ಸಚಿವರಿಗೆ ಮಾಹಿತಿಯ ಕೊರತೆಯಿದ್ದ ಹಾಗೆ ಉಲ್ಟಾ-ಪಲ್ಟಾ ಮಾತನಾಡುತ್ತಾರೆ. ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ ಎಂದು ಹೇಳಿದರು.