ಚೀನಾ:- ನೆರೆ ರಾಷ್ಟ್ರ ಚೀನಾದಲ್ಲಿ ನಾಲ್ಕು ಇಂಚಿನ ಬಾಲದೊಂದಿಗೆ ಮಗುವೊಂದು ಜನಿಸಿದೆ. ಈ ಘಟನೆ ವೈದ್ಯ ಲೋಕವನ್ನೇ ಬೆರಗಾಗಿಸಿದೆ.
ಚೀನಾದ ಹ್ಯಾಂಗ್ಝೌ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ಈ ಮಗುವಿನ ಬೆನ್ನಿನ ಭಾಗದಲ್ಲಿ ಬಾಲವಿರುವುದು ಪತ್ತೆಯಾಗಿದೆ. ಇದೊಂದು ಅಸಹಜ ಬೆಳವಣಿಗೆಯಾಗಿದ್ದು, ಬೆನ್ನುಮೂಳೆಗೆ ಸಂಬಂಧಿಸಿದ ಅಸ್ವಸ್ಥತೆಗಳ ಕಾರಣದಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯ ಪೀಡಿಯಾಟ್ರಿಕ್ ನ್ಯೂರೋಸರ್ಜರಿ ವಿಭಾಗದ ವೈದ್ಯ ಡಾ ಲೀ ನವಜಾತ ಶಿಶುವಿನ ಬೆನ್ನಿನ ಭಾಗದಲ್ಲಿ ಬಾಲ ಇರುವುದನ್ನು ಪತ್ತೆ ಹಚ್ಚಿದ್ದು, ಈ ಕುರಿತ ವಿಡಿಯೋವೊಂದನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಮಗುವಿನ ಬೆನ್ನುಹುರಿ ಸರಿಯಾಗಿ ಬೆಳವಣಿಗೆಯಾಗದಿದ್ದಾಗ ಸಂಭವಿಸುವ ಜನ್ಮ ದೋಷದಿಂದ ಈ ರೀತಿ ಬಾಲದಂತಹ ಅಂಗ ಬೆಳವಣಿಗೆಯಾಗುತ್ತದೆ ಎಂದು ಡಾ. ಲೀ ಹೇಳಿದ್ದಾರೆ. ಇದು ಬೆನ್ನು ಹುರಿಯ ಸುತ್ತಮುತ್ತಲಿನ ಅಂಗಾಂಶಗಳಿಗೆ ಅಸಹಜವಾಗಿ ಜೋಡಿಸಲ್ಪಟ್ಟಿರುವ ಒಂದು ರೀತಿಯ ಸ್ಥಿತಿಯಾಗಿದ್ದು, ಇದರಿಂದ ಬಾಲ ಬೆಳೆಯುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಇಂತಹ ಸ್ಥಿತಿ ಯಾರಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಇಂತಹ ಸಮಸ್ಯೆಗಳು ಸಂಭವಿಸಿದರೆ ಅದು ನರ ಸಂಬಂಧಿ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಹೇಳಿದ್ದಾರೆ.