ಕಠ್ಮಂಡು: ಮುಂದಿನ ತಿಂಗಳು ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ಉದ್ಘಾಟನೆ ಆಗಲಿದ್ದು, ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಅಯೋಧ್ಯೆ ವಿಶೇಷ ಉಡುಗೊರೆ ನೀಡಿ ವಿಶ್ ಮಾಡಲು ನೆರೆ ರಾಷ್ಟ್ರ ನೇಪಾಳ (Nepal) ಸಿದ್ಧತೆ ಮಾಡಿಕೊಂಡಿದೆ.
ಅಯೋಧ್ಯೆಯಲ್ಲಿ ಹೊಸ ವರ್ಷದ ಜನವರಿ 22 ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗಾಗಿ ನೇಪಾಳ ರಾಷ್ಟ್ರ ವಿವಿಧ ರೀತಿಯ ಆಭರಣಗಳು, ವಸ್ತುಗಳು, ವಸ್ತ್ರ ಹಾಗೂ ಸಿಹಿ ತಿನಿಸುಗಳು ಸೇರಿ ಹಲವು ಸ್ಮರಣಿಕೆಗಳನ್ನು ಕಳುಹಿಸಲಿದೆ.
ಸ್ಮರಣಿಕೆಗಳನ್ನು ತಲುಪಿಸಲು ಜನಕಪುರಧಾಮ್-ಅಯೋಧ್ಯಧಾಮ ಪ್ರಯಾಣವನ್ನು ಕೈಗೊಳ್ಳಲಾಗುವುದು ಎಂದು ನೇಪಾಳದ ಮೈ ರಿಪಬ್ಲಿಕಾ ಪತ್ರಿಕೆ ವರದಿ ಮಾಡಿದೆ. ಜನವರಿ 18 ರಂದು ಪ್ರಾರಂಭವಾಗುವ ಪ್ರಯಾಣವು ಜನವರಿ 20 ರಂದು ಅಯೋಧ್ಯೆಯಲ್ಲಿ ಕೊನೆಗೊಳ್ಳಲಿದೆ.
ಜನಕ್ಪುರಧಾಮ್ನಿಂದ ಜಲೇಶ್ವರನಾಥ್, ಮಲಂಗ್ವಾ, ಸಿಮ್ರೌಂಗಧ್, ಗಧಿಮಾಯಿ, ಬಿರ್ಗುಂಜ್ ಮೂಲಕ ಬೇಟಿಯಾ, ಕುಶಿನಗರ, ಸಿದ್ಧಾರ್ಥನಗರ, ಗೋರಖ್ಪುರ ಮೂಲಕ ಸಾಗಿ ಉತ್ತರ ಪ್ರದೇಶದ ಅಯೋಧ್ಯೆ ತಲುಪಲಿದೆ.
ಜ.20 ರಂದೇ ಸ್ಮರಣಿಕೆಗಳನ್ನು ಶ್ರೀರಾಮ ಜನ್ಮಭೂಮಿ ರಾಮಮಂದಿರ ಟ್ರಸ್ಟ್ಗೆ ಹಸ್ತಾಂತರಿಸಲಾಗುವುದು ಎಂದು ಜಾನಕಿ ದೇವಸ್ಥಾನದ ಜಂಟಿ ಮಹಂತ ರಾಮರೋಷನ್ ದಾಸ್ ವೈಷ್ಣವ್ ತಿಳಿಸಿದ್ದಾರೆ. ಜ.22 ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಜೊತೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ.