ದಾವಣಗೆರೆ: ನಗರಗಳಲ್ಲಿ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದರೆ ಪೊಲೀಸರು ದಂಡ ಹಾಕ್ತಾರೆ, ಅಲ್ಲದೇ, ನಿಯಮ ಪಾಲಿಸುವಂತೆ ಎಚ್ಚರಿಕೆಯನ್ನ ಕೊಡುತ್ತಾರೆ. ಆದರೆ, ದಾವಣಗೆರೆಯ ಸಾಮಾಜಿಕ ಕಾರ್ಯಕರ್ತನೊಬ್ಬ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದರೆ ಚಾಕ್ಲೇಟ್ ಮತ್ತು ವಡಾಗಳನ್ನ ನೀಡುತ್ತಾರೆ. ಹೌದು, ಇದು ಅಚ್ಚರಿಯಾದ್ರು ಕೂಡ ನಿಜ. ದಾವಣಗೆರೆಯ ಸಾಮಾಜಿಕ ಕಾರ್ಯಕರ್ತ ಎಂ ಜಿ ಶ್ರೀಕಾಂತ್ ಎಂಬಾತ ಇಂತಹದ್ದೊಂದು ಕೆಲಸವನ್ನ ದಾವಣಗೆರೆ ನಗರದಲ್ಲಿ ಮಾಡುತ್ತಿದ್ಧಾನೆ. ದಾವಣಗೆರೆಯ ಪಿಬಿ ರಸ್ತೆ, ಎವಿಕೆ ಕಾಲೇಜು, ಬಾಪೂಜಿ ಡೆಂಟಲ್ ಕಾಲೇಜ್ ಸೇರಿದಂತೆ ಜನನಿಬಿಡ ರಸ್ತೆಗಳಲ್ಲಿ ಎಂ ಜಿ ಶ್ರೀಕಾಂತ್ ಸಂಚಾರಿ ನಿಯಮ ಉಲ್ಲಂಘಿಸುವ ಬೈಕ್, ಕಾರ್ ಚಾಲಕರಿಗೆ ವಡಾ ಹಾಗೂ ಚಾಕ್ಲೇಟ್ ಗಳನ್ನ ನೀಡುತ್ತಿದ್ದಾರೆ.
ಇದಕ್ಕೊಂದು ಕಾರಣ ಕೂಡ ಇದ್ದು, ಈ ಮೂಲಕ ಶ್ರೀಕಾಂತ್ ಅರಿವನ್ನ ಮೂಡಿಸುತ್ತಿದ್ದಾರೆ. ಈಗ ದಾವಣಗೆರೆಯ ನಗರದಲ್ಲಿಯೂ ಕೂಡ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಎಲ್ಲ ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಗಳನ್ನ ಅಳವಡಿಕೆ ಕೂಡ ಮಾಡಲಾಗಿದೆ. ಟ್ರಾಫಿಕ್ ನಿಯಂತ್ರಿಸುವ ಉದ್ದೇಶದಿಂದ ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕೆಲವು ಕಡೆಗಳಲ್ಲಿ ಒನ ವೇ ಕೂಡ ಮಾಡಲಾಗಿದೆ. ಆದ್ರೆ, ವಾಹನ ಸವಾರರು ಕೆಲವರು ಇನ್ನು ಕೂಡ ಸರಿಯಾಗಿ ಸಂಚಾರಿ ನಿಯಮಗಳನ್ನ ಪಾಲಿಸುತ್ತಿಲ್ಲ.
ಒನ್ ವೇ ಗಳಲ್ಲಿಯೇ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ಎದುರು ಬದರಾಗಿ ಚಲಿಸೋದು ಮತ್ತು ರೆಡ್ ಸಿಗ್ನಲ್ ಇದ್ದರೂ ಕೂಡ ನಿಯಮ ಉಲ್ಲಂಘಿಸಿ ವಾಹನಗಳನ್ನ ಚಲಾಯಿಸಿಕೊಂಡು ಹೋಗುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಹಲವಾರು ವಾಹನಗಳ ಸವಾರರು ದಾವಣಗೆರೆ ನಗರದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನ ತಡೆಯುವ ದೃಷ್ಟಿಯಿಂದ ಮತ್ತು ಸಂಚಾರಿ ನಿಯಮಗಳನ್ನ ವಾಹನ ಸವಾರರ ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಇಂತಹದ್ದೊಂದು ಸಾಮಾಜಿಕ ಕಾರ್ಯವನ್ನ ಶ್ರೀಕಾಂತ್ ಮಾಡುತ್ತಿದ್ದಾರೆ.
ಅಪಘಾತ ಸಂಭವಿಸಿ ಆಸ್ಪತ್ರೆ ಸೇರಿದಾಗ ಪೋಷಕರು ಕಣ್ಣೀರು ಹಾಕುತ್ತಾರೆ, ಒಂದು ವೇಳೆ ಅಪಘಾತದಲ್ಲಿ ಮೃತಪಟ್ಟರೆ ಮನೆಯವರೆಲ್ಲಾ ತಿಥಿ ಮಾಡಿ ವಡೆ ತಿಂತಾರೆ. ಹಾಗಾಗಿ, ಮೊದಲು ನೀವೇ ವಡಾ ತಿನ್ನಿ. ಆಗಲಾದರೂ ನಿಮಗೆ ನೆನಪಿಗೆ ಬರಬಹುದು. ಹಾಗಾಗಿ, ವಡಾ ತಿನ್ನಿ, ಸಂಚಾರಿ ನಿಯಮ ಪಾಲಿಸಿ. ಆಗ ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ ಎಂದು ಎಚ್ಚರಿಸುವ ಉದ್ದೇಶದಿಂದ ಶ್ರೀಕಾಂತ್ ಈ ಕಾರ್ಯವನ್ನ ಕೈಗೆತ್ತಿಕೊಂಡಿದ್ದಾರೆ. ಇದೀಗ ಶ್ರೀಕಾಂತ್ ಕೆಲಸಕ್ಕೆ ವಾಹನ ಸವಾರರು ಥ್ಯಾಕ್ಸ್ ಹೇಳುತ್ತಿದ್ದು, ಸಾರ್ವಜನಿಕರಿಂದಲೂ ಕೂಡ ಪ್ರಶಂಸೆ ವ್ಯಕ್ತವಾಗುತ್ತಿದೆ.