ವಾಷಿಂಗ್ಟನ್: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಪ್ರಮುಖ ಸಾರ್ವಜನಿಕ ಸೇವೆಗಳನ್ನು ಕಳಚಿ ಹಾಕಲಾಗುತ್ತಿದೆ ಎಂದು ಆಪಾದಿಸಿ 20 ಕ್ಕೂ ಹೆಚ್ಚು ಮಂದಿ ನಾಗರಿಕ ಸೇವಾ ಸಿಬ್ಬಂದಿ ಡಿಪಾರ್ಟ್ಮೆಂಟ್ ಆಫ್ ಗವರ್ನಮೆಂಟ್ ಎಫಿಶಿಯೆನ್ಸಿ (ಡಿಓಜಿಇ) ಇಂದ ಹೊರ ಬಂದಿದ್ದಾರೆ.
ಎಂಜಿನಿಯರ್ ಗಳು, ಡಾಟಾ ವಿಜ್ಞಾನಿಗಳು ಮತ್ತು ಉತ್ಪನ್ನ ವ್ಯವಸ್ಥಾಪಕರು ಸೇರಿದಂತೆ ಉನ್ನತ ಹುದ್ದೆಯ 21ಮಂದಿ ಜಂಟಿಯಾಗಿ ರಾಜೀನಾಮೆಪತ್ರ ನೀಡಿದ್ದಾರೆ. ಅಮೆರಿಕದ ಜನತೆಗೆ ಮತ್ತು ಸಂವಿಧಾನಕ್ಕೆ ನೀಡಿದ ಪ್ರಮಾಣವಚನವನ್ನು ಉಲ್ಲಂಘಿಸದೇ ಪ್ರಸ್ತುತ ಆಡಳಿತದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿರುವ ಉದ್ಯೋಗಿಗಳು ಸ್ಪಷ್ಟಪಡಿಸಿದ್ದಾರೆ.
“ಅಧ್ಯಕ್ಷೀಯ ಆಡಳಿತದಲ್ಲಿ ಜನತೆಗೆ ಸೇವೆ ಮಾಡುವ ಮತ್ತು ನಮ್ಮ ಪ್ರಮಾಣವನ್ನು ಎತ್ತಿಹಿಡಿಯುವ ಪ್ರತಿಜ್ಞೆಯನ್ನು ಕೈಗೊಂಡಿದ್ದೆವು. ಆದರೆ ಈ ಬದ್ಧತೆಗಳನ್ನು ಗೌರವಿಸುವುದು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿದೆ” ಎಂದು ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.