ಬೆಂಗಳೂರು ಗ್ರಾಮಾಂತರ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಶಾಲಾ ಬಾಲಕ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರಾಜು ಎಂಬುವವರ ಮಗನಾದ ನಾಗೇಶ್(14) ಮೃತ ದುರ್ದೈವಿ. ಶಾಲೆ ಮುಗಿದ ನಂತರ ಬಿಸಿಲಿನ ತಾಪಕ್ಕೆ ಮೂರು ಜನ ಸ್ನೇಹಿತರೊಂದಿಗೆ ಕೃಷಿ ಹೊಂಡದಲ್ಲಿ ಈಜಾಡಲು ಹೋಗಿದ್ದಾನೆ. ಮೂರು ಮಂದಿಯಲ್ಲಿ ನಾಗೇಶ್ ನೇರವಾಗಿ ನೀರಿಗೆ ಇಳಿದಿದ್ದಾನೆ. ಈಜು ಬಾರದ ಹಿನ್ನೆಲೆ ನೀರಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತೊಂದು ಘಟನೆಯಲ್ಲಿ ಈಜಲು ಹೋಗಿ ನೀರಿನ ಹೊಂಡದಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹುಲಗಬಾಳ ರಸ್ತೆಯ ಬಳಿ ನಡೆದಿದೆ. ಸರ್ವೇಶ ಸತೀಶ ಗುಜ್ಜರ (12) ಮೃತ ಬಾಲಕನಾಗಿದ್ದು, ನಂದಕುಮಾರ ಬಳ್ಳೊಳ್ಳಿ ಎಂಬುವವರ ತೋಟದ ನೀರಿನ ಹೊಂಡದಲ್ಲಿ ಈಜಲು ತೆರಳಿದ್ದಾಗ ದುರ್ಘಟನೆ ನಡೆದಿದೆ. ಅಥಣಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.