ಕೆಜಿಎಫ್ ಸಿನಿಮಾದ ಮೂಲಕ ದೇಶ, ವಿದೇಶದಲ್ಲೂ ಖ್ಯಾತಿ ಘಳಿಸಿದ ರಾಕಿಂಗ್ ಸ್ಟಾರ್ ಯಶ್ ಸದ್ಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದೀಗ ಯಶ್ ಮತ್ತೊಂದು ಮಹೋನ್ನತ ಚಿತ್ರ ‘ರಾಮಾಯಣ’ದ ಶೂಟಿಂಗ್ ಆರಂಭಿಸಿದ್ದಾರೆ.
ಬಾಲಿವುಡ್ನ ಯಶಸ್ವಿ ನಿರ್ದೇಶಕ, ಸೂಪರ್ ಹಿಟ್ ಚಿತ್ರಗಳಿಗೆ ಆ್ಯಕ್ಷನ್ ಹೇಳಿರುವ ನಿತೇಶ್ ತಿವಾರಿ ಅವರ ‘ರಾಮಾಯಣ’ ಚಿತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದು, ಮುಂಬೈಯಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಯಶ್ ಭಾಗಿಯಾಗಿದ್ದಾರೆ.ಆ ಮೂಲಕ ಯಶ್ ಅಧಿಕೃತವಾಗಿ ʼರಾಮಾಯಣʼ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.
ಈಗಾಗಲೇ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮಾಯಣ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಅಖಾಡಕ್ಕೆ ರಾಕಿ ಭಾಯ್ ಎಂಟ್ರಿಯಾಗಿದೆ. ಈ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದು, ಯಶ್ ರಾವಣನಾಗಿ ಅಬ್ಬರಿಸಲಿದ್ದಾರೆ. ತಾರಾಗಣದಿಂದಲೇ ಸಿನಿಪ್ರಿಯರ ಗಮನ ಸೆಳೆದ ʼರಾಮಾಯಣʼ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.
ʼರಾಮಾಯಣʼ 2 ಭಾಗಗಳಲ್ಲಿ ತೆರೆ ಕಾಣಲಿದೆ. ಈಗಾಗಲೇ ಮುಂಬೈ ತಲುಪಿರುವ ಯಶ್ ‘ರಾಮಾಯಣ – ಪಾರ್ಟ್ 1’ರ ಚಿತ್ರೀಕರಣ ಆರಂಭಿಸಿದ್ದಾರೆ. ಫೆ. 21ರಿಂದಲೇ ಅವರು ಶೂಟಿಂಗ್ನಲ್ಲಿ ಭಾಗಿಯಾಗಿದ್ದು, 2 ದಿನಗಳ ಹಿಂದೆ ಅವರ ಕಾಸ್ಟ್ಯೂಮ್ ಟ್ರಯಲ್ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.
ಸದ್ಯ ಚಿತ್ರದ ಪ್ರಮುಖ ಭಾಗವಾದ ಯುದ್ಧದ ದೃಶ್ಯಗಳ ಶೂಟಿಂಗ್ ನಡೆಸಲಾಗುತ್ತಿದೆ. ಯುದ್ಧದ ಕೆಲವು ಭಾಗಗಳನ್ನು ಮುಂಬೈಯ ಅಕ್ಸಾ ಬೀಚ್ನಲ್ಲಿ ಚಿತ್ರೀಕರಿಸಲು ಸಿನಿಮಾತಂಡ ಪ್ಲ್ಯಾನ್ ಮಾಡಿಕೊಂಡಿದೆ. ಅದಾದ ಬಳಿಕ ದಹಿಸರ್ನಲ್ಲಿ ಸ್ಟುಡಿಯೊದಲ್ಲಿ ಚಿತ್ರೀಕರಣ ನಡೆಯಲಿದೆ.
ʼರಾಮಾಯಣʼ 2 ಭಾಗಗಳಲ್ಲಿ ತೆರೆಗೆ ಬರಲಿದ್ದು, ಮೊದಲ ಭಾಗ 2026ರ ದೀಪಾವಳಿಯಂದು ಮತ್ತು 2ನೇ ಭಾಗ 2027ರ ದೀಪಾವಳಿಯಂದು ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಈ ವರ್ಷಾಂತ್ಯದಲ್ಲಿ ಯಶ್ ನಟನೆಯ ʼಟಾಕ್ಸಿಕ್ʼ ರಿಲೀಸ್ ಆಗಲಿದೆ.