ಬೆಳಗಾವಿ/ ಬೆಂಗಳೂರು:- 30 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ನಲ್ಲಿ ಹೆಚ್ಚುವರಿ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಬಿ ಪಿ ಹರೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆಯಲ್ಲಿ ಒಟ್ಟು 2443 ವಿದ್ಯಾರ್ಥಿ ನಿಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟು 2,28,411 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶದ ಸೌಲಭ್ಯ ಕಲ್ಪಿಸಲಾಗಿದೆ. ಹರಿಹರ ವಿಧಾನಸಭಾ ಕ್ಷೇತ್ರದ 9 ಹಾಸ್ಟೆಲ್ಗಳಲ್ಲಿ 745 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲಾಗಿದೆ. ವಿದ್ಯಾರ್ಥಿನಿಲಯಗಳ ಪ್ರವೇಶ ಪ್ರಕ್ರಿಯೆ ಮುಗಿದ ಬಳಿಕ ಜಿಲ್ಲೆಯಲ್ಲಿ ಆಯಾ ತಾಲೂಕಿನ ವಿದ್ಯಾರ್ಥಿ ನಿಲಯಗಳಿಗೆ ತಾತ್ಕಾಲಿಕವಾಗಿ ಸ್ಥಾನಗಳನ್ನು ಆಂತರಿಕ ವರ್ಗಾವಣೆ ಮಾಡಿಕೊಂಡು ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿ ನಿಲಯಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪ್ರವೇಶ ದೊರಕದ ಅರ್ಹ ಹಿಂದುಳಿದ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ಅನುದಾನದ ಲಭ್ಯತೆಯ ಅನುಸಾರ, ವಿದ್ಯಾಸಿರಿ ಯೋಜನೆಯಡಿ ಪ್ರತಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 1500 ರೂ. ನಂತೆ ಗರಿಷ್ಠ 10 ತಿಂಗಳಿಗೆ 15 ಸಾವಿರ ರೂ. ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಅವರು, ಭವಿಷ್ಯದ ದೃಷ್ಟಿಯಿಂದ ಹಾಸ್ಟೆಲ್ಗಳ ಸಂಖ್ಯೆಯನ್ನು ಹೆಚ್ಚಿಸಿ, ಪ್ರಸ್ತುತ ಸಮಸ್ಯೆಗೆ ಮಾತ್ರವಲ್ಲ. ಭವಿಷ್ಯದ ದೃಷ್ಟಿಯಿಂದ ಯೋಜನೆ ರೂಪಿಸಿ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಹಾಸ್ಟೆಲ್ ಸಮಸ್ಯೆಗಳಿದ್ದು, ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ ಸೇರಿದಂತೆ ಹಲವು ಕಡೆ ಹೆಚ್ಚಿನ ಹಾಸ್ಟೆಲ್ ನಿರ್ಮಾಣ ಮಾಡುವ ಸಂಬಂಧ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ತಂಗಡಗಿ ಅವರು ಹೇಳಿದರು.
ಇನ್ನು ಕೊರೊನಾದಿಂದ ಶೈಕ್ಷಣಿಕ ವರ್ಷದಲ್ಲಿ ಏರುಪೇರಾಗಿದೆ. ಪದವಿ, ತಾಂತ್ರಿಕ ಹಾಗೂ ವೃತ್ತಿಪರ ವಿದ್ಯಾರ್ಥಿಗಳಿಗೆ ಬೇರೆ ತಿಂಗಳಲ್ಲಿ ಕಾಲೇಜುಗಳು ಪ್ರಾರಂಭವಾಗುತ್ತವೆ. ಇದರಿಂದ ತೊಂದರೆಯಾಗಿದ್ದು, ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಸಚಿವರು ಉತ್ತರಿಸಿದರು.