ಕನಕಗಿರಿ:- ಅನೈತಿಕ ಚಟುವಟಿಕೆಗಳ ತಾಣವಾಗಿ ಪಟ್ಟಣದ ರಾಜಬೀದಿಯಲ್ಲಿರುವ ಹಳೆಯ ಪೊಲೀಸ್ ಠಾಣೆಯ ಕಟ್ಟಡ ಪಾಳು ಬಿದ್ದಿದೆ.
ಪಟ್ಟಣ ಪಂಚಾಯಿತಿ ಮೂಲಗಳ ಪ್ರಕಾರ ಈ ಕಟ್ಟಡ ಮುಜರಾಯಿ ಇಲಾಖೆಗೆ ಸಂಬಂಧಿಸಿದ್ದು ಎನ್ನಲಾಗುತ್ತಿದೆ. ‘ಪೊಲೀಸ್ ಇಲಾಖೆಯವರು ಬಹಳ ವರ್ಷಗಳ ಕಾಲ ಪೊಲೀಸ್ ಠಾಣೆಯನ್ನಾಗಿ ಉಪಯೋಗಿಸಿದ್ದಾರೆ.
ದಶಕದ ಹಿಂದೆ ಲಿಂಗಸಗೂರು-ಗಂಗಾವತಿ ರಸ್ತೆಯಲ್ಲಿ ಹೊಸ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಕಟ್ಟಡ ಖಾಲಿ ಬಿದ್ದಿತ್ತು. ಕಂದಾಯ ಇಲಾಖೆಯವರು ಉಪ ತಹಶೀಲ್ದಾರ್ ಕಚೇರಿಯನ್ನಾಗಿ ಬಳಸಿಕೊಂಡರು. ಕಟ್ಟಡವು ಪಟ್ಟಣದ ಹೃದಯ ಭಾಗದಲ್ಲಿರುವ ಕಾರಣ ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ವಿವಿಧ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಗಳು ಇಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷದ ಹಿಂದೆ ಕಲಕೇರಿ ಗ್ರಾಮದ ರಸ್ತೆಯಲ್ಲಿ ಹೊಸ ಉಪ ತಹಶೀಲ್ದಾರ್ ಕಚೇರಿ ಆರಂಭಗೊಂಡ ಪರಿಣಾಮ ಪೊಲೀಸ್ ಠಾಣೆ ಕಟ್ಟಡ ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗಿದೆ’ ಎಂದು ಪ್ರಮುಖರಾದ ದೊಡ್ಡಬಸಪ್ಪ ಭತ್ತದ, ಪಾಮಣ್ಣ ಅರಳಿಗನೂರು, ಕೊಟ್ರೇಶ ಮಡಿವಾಳರ ದೂರಿದರು.
ರಾಜಬೀದಿ, ವಾಲ್ಮೀಕಿ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಪರಿಸರದಲ್ಲಿ ಒಂದು ಸಾರ್ವಜನಿಕ ಶೌಚಾಲಯ ಇಲ್ಲದ ಪರಿಣಾಮ ಸಾರ್ವಜನಿಕರು ಹಳೆಯ ಪೊಲೀಸ್ ಠಾಣೆಯ ಕಟ್ಟಡದ ಆವರಣವನ್ನು ಶೌಚಾಲಯವಾಗಿ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ. ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ಮದ್ಯ ಸೇವನೆ ಸೇರಿದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ, ಹಗಲು ಯುವಕರು ಬೇವಿನ ಗಿಡಗಳ ಕಟ್ಟೆಯ ಮೇಲೆ ಕುಳಿತು ಜೂಜಾಟವಾಡುತ್ತಿದ್ದಾರೆ. ಸರ್ಕಾರ ತಾಲ್ಲೂಕು ಕಚೇರಿ ಸ್ಥಾಪನೆ ಮಾಡಲು ಈ ಕಟ್ಟಡವನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.