ಹುಬ್ಬಳ್ಳಿ:- ಆನ್ಲೈನ್ ಟ್ರೇಡಿಂಗ್ ಪ್ಲಾಟ್ಫಾರ್ಮ್ನಲ್ಲಿ ಟ್ರೇಡಿಂಗ್ ಖಾತೆ ತೆರೆದು ಹೆಚ್ಚು ಲಾಭ ಗಳಿಸಬಹುದು ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ 1.03 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿಯ ಗೋಕುಲ್ ರಸ್ತೆಯ ಲಕ್ಷ್ಮೀನಗರದ ಅರುಣ ಗಲಗಲಿ ಎಂಬವರು ವಂಚನೆಗೊಳಗಾದವರು. ಇವರಿಗೆ ಅ.24ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ರವಿ ಸಿಂಗ್ ಎಂದು ಟ್ರೇಡನ್ ಫಾರೆಕ್ಸ್ ಟ್ರೋಕರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಆನ್ಲೈನ್ ಟ್ರೇಡಿಂಗ್ ಪ್ಲಾಟ್ಫಾರ್ಮ್ನಲ್ಲಿ 5 ಸಾವಿರ ರೂ. 4,500 ರೂ. ಸಂದಾಯ ಮಾಡಿದರೆ, ಹೆಚ್ಚು ಹಣ ಗಳಿಸಬಹುದು ಎಂದು ಹೇಳಿದ್ದಾನೆ. ನಂತರ ಕ್ರೆಡಿನಟೈಲ್ ನೀಡಿ ಮಾಹಿತಿ ಬಳಸಿ ಆನ್ಲೈನ್ ಅಪ್ಲಿಕೇಶನನಲ್ಲಿ ಖಾತೆ ತೆರೆಯಲು ಹೇಳಿದ್ದಾನೆ.
ಇದಾದ ಬಳಿಕ ವ್ಯಾಟ್ಸ್ಆ್ಯಪ್ ಗೆ ಕರೆ ಮಾಡಿದ ಮತ್ತೊಬ್ಬ ಆನ್ಲೈನ್ ಅಪ್ಲಿಕೇಶನ್ ನಲ್ಲಿ ಹಣ ಜಮಾ ಆದಂತೆ ತೋರಿಸಿದ್ದಾನೆ. ಆರಂಭದಲ್ಲಿ ಟ್ರೇಡಿಂಗ್ ಪ್ಲಾಟ್ ಫಾರ್ಮ್ನಿಂದ ಹಣ ವಿಥ್ಡ್ರಾ ಹೇಗೆ ಮಾಡುವುದು ಎಂದು ತಿಳಿಸಿ ಅರುಣ ಅವರ ಬ್ಯಾಂಕ್ ಖಾತೆಗೆ 2 ಸಾವಿರ ರೂ. ವರ್ಗಾಯಿಸಿದ್ದಾನೆ. ನಂತರ ಹೆಚ್ಚು ಹಣ ಹೂಡಿಕೆ ಮಾಡುವಂತೆ ಹೇಳಿ ಎಸ್ಬಿಐ ಬ್ಯಾಂಕ್ ಖಾತೆಯಿಂದ 58,25,046 ರೂ ಹಾಗೂ ಯೆಸ್ ಬ್ಯಾಂಕ್ ಖಾತೆಯಿಂದ 45,06,200 ರೂ. ವರ್ಗಾಯಿಸಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.