ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಸೆಪ್ಟೆಂಬರ್ 5 ರಂದು ಪ್ರಾರಂಭವಾಗಲಿರುವ ದುಲೀಪ್ ಟ್ರೋಫಿಯ ಆರಂಭಿಕ ಪಂದ್ಯಗಳಲ್ಲಿ ಒಂದನ್ನು ಅನಂತಪುರದಿಂದ ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ದುಲೀಪ್ ಟ್ರೋಫಿಯನ್ನು ಸೆಪ್ಟೆಂಬರ್ 5 ರಂದು ಆಂಧ್ರಪ್ರದೇಶದ ಅನಂತಪುರದಲ್ಲಿ ಎರಡು ಸೆಟ್ಗಳ ಮೊದಲ ಸುತ್ತಿನ ಪಂದ್ಯಗಳೊಂದಿಗೆ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಈಗ ಆ ಪಂದ್ಯಗಳಲ್ಲಿ ಒಂದನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ. ಅನಂತಪುರವು ಬೆಂಗಳೂರಿನಿಂದ ಸರಿಸುಮಾರು 230 ಕಿಮೀ ದೂರದಲ್ಲಿದೆ. ಈ ನಗರ ವಿಮಾನ ಸಂಪರ್ಕ ಹೊಂದಿಲ್ಲ. ಕೆಲವು ಟೀಮ್ ಇಂಡಿಯಾದ ಆಟಗಾರರಿಗೆ ಅವಕಾಶ ಕಲ್ಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮೊದಲು ರೆಡ್-ಬಾಲ್ ಕ್ರಿಕೆಟ್ನ ಅನುಭವವನ್ನು ಪಡೆಯಲಿದ್ದಾರೆ ಎಂದು ವರದಿ ತಿಳಿಸಿದೆ.
ಬಾಂಗ್ಲಾದೇಶ: ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ದ ಕೊಲೆ ಪ್ರಕರಣ ದಾಖಲು
ಭಾರತವು ಬಾಂಗ್ಲಾದೇಶದ ವಿರುದ್ಧ ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ಮತ್ತು ಸೆಪ್ಟೆಂಬರ್ 27 ರಿಂದ ಕಾನ್ಪುರದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ದುಲೀಪ್ ಟ್ರೋಫಿಯಲ್ಲಿ ಆಡುವುದು ರೋಹಿತ್ ಮತ್ತು ಕೊಹ್ಲಿಗೆ ಬಿಟ್ಟಿದ್ದು, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕೆ ಎಲ್ ರಾಹುಲ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಕುಲ್ದೀಪ್ ಯಾದವ್ ಮುಂತಾದ ಕೆಲವು ಪ್ರಮುಖ ಆಟಗಾರರು ಈ ಪಂದ್ಯಾವಳಿಗೆ ಸಂಪೂರ್ಣವಾಗಿ ಅಥವಾ ಭಾಗಶಃ ಲಭ್ಯವಾಗುವ ನಿರೀಕ್ಷೆಯಿದೆ.
ಬುಮ್ರಾ ಮತ್ತು ಅಶ್ವಿನ್ ಅವರು ಬಾಂಗ್ಲಾದೇಶ ಸರಣಿಯ ಮೊದಲು ನೇರವಾಗಿ ಭಾರತ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿರುವುದರಿಂದ ಯಾವುದೇ ಹಂತದಲ್ಲೂ ಪಂದ್ಯಾವಳಿಯಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ. ದುಲೀಪ್ ಟ್ರೋಫಿಯಲ್ಲಿ ರಿಷಬ್ ಪಂತ್ಗೆ ಅವಕಾಶ ನೀಡಲು ಆಯ್ಕೆ ಸಮಿತಿ ನಿರ್ಧರಿಸುತ್ತಿದೆ. ಒಂದು ವೇಳೆ ಪಂತ್ ಆಡುವುದು ಕನ್ಫರ್ಮ್ ಆದರೆ 2022 ರಲ್ಲಿ ಸಂಭವಿಸಿದ ಕಾರು ಅಘಾತದ ಬಳಿಕ ಅವರು ಆಡುವ ಮೊದಲ ರೆಡ್ ಬಾಲ್ ಪಂದ್ಯವಾಗಲಿದೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಪಂತ್ ವೈಟ್ ಬಾಲ್ ಕ್ರಿಕೆಟ್ಗೆ ಕಂಬ್ಯಾಕ್ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಮೊಹಮ್ಮದ್ ಶಮಿ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ವರದಿ ತಿಳಿಸಿದೆ.
ಪ್ರಮುಖ ಆಟಗಾರರ ಲಭ್ಯತೆಯು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ಗೆ ಮುಂಚಿತವಾಗಿ ಚೆನ್ನೈನಲ್ಲಿ ನಡೆಸಲು ಯೋಚಿಸುತ್ತಿರುವ ಪೂರ್ವಸಿದ್ಧತಾ ಶಿಬಿರದ ದಿನಾಂಕಗಳಿಗೆ ಒಳಪಟ್ಟಿರುತ್ತದೆ. ಇಶಾನ್ ಕಿಶನ್ ಕೂಡ ದುಲೀಪ್ ಟ್ರೋಫಿಗೆ ಆಯ್ಕೆಯಾಗುವ ಸಾಧ್ಯತೆ ಇದೆ.