ಕೇರಳದ ಕಾಸರಗೋಡಿನ ಕಾಡಿನಲ್ಲಿ ಅಪರೂಪದ ವಿಸ್ಮಯವೊಂದು ಪತ್ತೆಯಾಗಿದೆ. ರಾತ್ರಿಯಲ್ಲಿ ರೇಡಿಯಂನಂತೆ ಹೊಳೆಯುವ ಜೈವಿಕವಾಗಿ ಪ್ರಕಾಶಿಸಲ್ಪಡುವ ಅಣಬೆಗಳನ್ನು ಕಾಸರಗೋಡಿನ ದಟ್ಟ ಕಾಡುಗಳಲ್ಲಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ನೈಸರ್ಗಿಕವಾಗಿ ಹೊಳೆಯಲ್ಪಡುವ ಅತೀ ಅಪರೂಪದ ಅಣಬೆಯನ್ನು ಸಂಶೋಧಕರು ಪತ್ತೆ ಮಾಡಿದ್ದು, ರಾತ್ರಿಯ ದಟ್ಟ ಕತ್ತಲಲ್ಲಿ ಇದು ರೇಡಿಯಂನಂತೆ ಹಸಿರು ಬಣ್ಣದಲ್ಲಿ ಕಂಗೊಳಿಸುತ್ತದೆ. ಇದು ವಿಜ್ಞಾನ ಲೋಕಕ್ಕೆ ವಿಸ್ಮಯ ಉಂಟು ಮಾಡಿದೆ.
‘ಫಿಲೋಬೊಲೆಟಸ್ ಮ್ಯಾನಿಪುಲಾರಿಸ್’ ಎಂದು ಕರೆಯಲ್ಪಡುವ ಈ ಆಕರ್ಷಕ ಅಣಬೆಗಳು ಜೀವರಾಸಾಯನಿಕ ಪ್ರಕ್ರಿಯೆಯ ಮೂಲಕ ತಮ್ಮದೇ ಆದ ಬೆಳಕನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಕಾಸರಗೋಡು ವಿಭಾಗ ಮತ್ತು ಮಶ್ರೂಮ್ಸ್ ಆಫ್ ಇಂಡಿಯಾ ಕಮ್ಯುನಿಟಿ ಜಂಟಿಯಾಗಿ ಕೇರಳದ ರಾಣಿಪುರಂ ಅರಣ್ಯದಲ್ಲಿ ಮೈಕ್ರೋ ಫಂಗಲ್ ಸಮೀಕ್ಷೆ ನಡೆಸಿದ ವೇಳೆ ಈ ಅಣಬೆಗಳು ಪತ್ತೆಯಾಗಿವೆ.
ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಒಳಗೊಂಡ ಈ ಸಮೀಕ್ಷಾ ತಂಡದಲ್ಲಿ ಕಾಸರಗೋಡು ವಿಭಾಗೀಯ ಅರಣ್ಯಾಧಿಕಾರಿ ಕೆ.ಅಶ್ರಫ್, ಡಾ.ಜಿನು ಮುರಳೀಧರನ್, ಡಾ.ಸಂತೋಷ್ ಕುಮಾರ್ ಕೂಕಲ್, ಕೆ.ಎಂ.ಅನೂಪ್, ಸಚಿನ್ ಪೈ ಮತ್ತು ಪೂರ್ಣಾ ಸಜ್ನಾ ಇವರು ಈ ಮೈಕ್ರೋ ಫಂಗಲ್ ಭಾಗವಹಿಸಿದ್ದರು. ಈ ಸೀಕ್ಷೆಯ ವೇಳೆ 50 ಕ್ಕೂ ಹೆಚ್ಚು ವಿವಿಧ ಜಾತಿಯ ಅಣಬೆಗಳು ಕಂಡು ಬಂದಿವೆ. ಅದರಲ್ಲೂ ರಾತ್ರಿಯ ವೇಳೆ ಬೆಳಕು ಸೂಸುವ ಬಯೋಲ್ಯುಮಿನೆಸೆಂಟ್ ಅಣಬೆಗಳು ಈ ಸಮೀಕ್ಷಾ ತಂಡದ ಪ್ರಮುಖ ಆವಿಷ್ಕಾರವಾಗಿದೆ. ಆದರೆ ಈ ಹೊಳೆಯುವ ಅಣಬೆಗಳು ಸೇವಿಸಲು ಅಥವಾ ಬಳಕೆಗೆ ಯೋಗ್ಯವಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಫಿಲೋಬೊಲೆಟಸ್ ಮ್ಯಾನಿಪುಲಾರಿಸ್, ಬಯೋಲುಮಿನೆಸೆಂಟ್ ಅಣಬೆಗಳ ಆಕರ್ಷಕ ಜಾತಿಯಾಗಿದೆ. ಈ ಅಣಬೆಗಳು ತಮ್ಮ ಜೀವಕೋಶಗಳಲ್ಲಿನ ರಾಸಾಯನಿಕ ಕ್ರಿಯೆಯಿಂದಾಗಿ ರಾತ್ರಿಯಲ್ಲಿ ಪ್ರಕಾಶಮಾನವಾದ ಹಸಿರು ಬಣ್ಣವನ್ನು ಹೊರಸೂಸುತ್ತವೆ. ಇವು ಉಷ್ಣವಲಯದ, ಆರ್ದ್ರತೆ ಇರುವ ವಾತಾವರಣದಲ್ಲಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ದಟ್ಟವಾದ ಕಾಡುಗಳಲ್ಲಿ ಬಿದ್ದ ಮರಗಳು ಮತ್ತು ಕೊಳೆತ ಎಲೆಗಳಿಂದ ನಿರ್ಮಿತವಾದ ಸಾವಯವ ಕಾಂಪೋಸ್ಟ್ಗಳು ಸಾಕಷ್ಟು ಇರುತ್ತವೆ. ಈ ಸಮೃದ್ಧ ತೇವಾಂಶವುಳ್ಳ ಪರಿಸರವು ಅವುಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಮತ್ತು ಈ ವಾತಾವರಣ ಅಣಬೆಗಳಿಗೆ ವಿಶಿಷ್ಟವಾದ ಹೊಳೆಯುವ ಸಾಮರ್ಥ್ಯವನ್ನು ನೀಡುತ್ತವೆ ಎಂದು ಸಸ್ಯಶಾಸ್ತ್ರ ತಜ್ಞ ದಿಲೀಪ್ ಕುಮಾರ್ ಹೇಳಿದ್ದಾರೆ.