ಬೆಂಗಳೂರು:- ಬೆಂಗಳೂರಿನ ವೈಟ್ಫೀಲ್ಡ್ ನಲ್ಲಿ ಬೈಕ್ ಸವಾರಿ ಮಾಡುವಾಗ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟವಾಗಿ ಯುವಕನೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಜರುಗಿದೆ.
ಯುವಕನನ್ನು ಪ್ರಸಾದ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪ್ರಸಾದ್ ಬುಧವಾರ ಬೈಕ್ ರೈಡ್ ಮಾಡುವಾಗ ಮೊಬೈಲ್ ಅನ್ನು ಪ್ಯಾಂಟ್ ಜೇಬಿನಲ್ಲಿರಿಸಿದ್ದರು.
ಆಗ ಅಕಸ್ಮಾತ್ ಆಗಿ ಅದು ಸ್ಫೋಟವಾಗಿದೆ. ಸ್ಫೋಟದ ತೀವ್ರತೆಗೆ ಸೊಂಟದ ಕೆಳಭಾಗ ಸುಟ್ಟು ಹೋಗಿದ್ದು, ಗಂಭೀರ ಗಾಯಗಳಾಗಿವೆ. ಕೂಡಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಟ್ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ನಡುವೆ, ಮೊಬೈಲ್ ಸ್ಫೋಟವಾಗಿ ಪ್ರಸಾದ್ ಗಾಯಗೊಂಡ ಘಟನೆ ಅವರು ಮೊಬೈಲ್ ಖರೀದಿಸಿದ್ದ ಶೋರೂಂ ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ಅವರು ಸ್ಪಂದಿಸಿದ್ದು, ಪ್ರಸಾದ್ ಅವರ ಅಲ್ಪ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಮತ್ತು ಮೊಬೈಲ್ನ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.