ಸಾಮಾಜಿಕ ಮಾಧ್ಯಮದಲ್ಲಿ ಸರಕಾರವನ್ನು ಟೀಕಿಸಿದ ನಿವೃತ್ತ ಶಿಕ್ಷಕನಿಗೆ ಸೌದಿ ಅರೆಬಿಯಾದ ನ್ಯಾಯಾಲಯ 30 ವರ್ಷ ಜೈಲುಶಿಕ್ಷೆ ವಿಧಿಸಿದೆ.
ಆರೋಪಿ ಮುಹಮ್ಮದ್ ಅಲ್–ಘಮ್ಡಿಯನ್ನು 2022ರ ಜೂನ್ನಲ್ಲಿ ಬಂಧಿಸಲಾಗಿದ್ದು ಸೌದಿ ನಾಯಕತ್ವದ ವಿರುದ್ಧ ಪಿತೂರಿ, ಸರಕಾರಿ ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಮತ್ತು ಭಯೋತ್ಪಾದಕ ಸಿದ್ಧಾಂತಕ್ಕೆ ಬೆಂಬಲ ಇತ್ಯಾದಿ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.
2023ರ ಜುಲೈಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು ಶಿಕ್ಷೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. 2023ರ ಸೆಪ್ಟಂಬರ್ನಲ್ಲಿ ಮಾಧ್ಯಮದವರ ಜತೆ ಮಾತನಾಡಿದ್ದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್, ನ್ಯಾಯಾಲಯ ಶಿಕ್ಷೆಯನ್ನು ಬದಲಾಯಿಸುವ ನಿರೀಕ್ಷೆಯಿದೆ ಎಂದಿದ್ದರು.
ಬಳಿಕ ಆರೋಪಿ ಮರಣದಂಡನೆ ಶಿಕ್ಷೆಯ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಆಗಸ್ಟ್ನಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿ 30 ವರ್ಷದ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಆರೋಪಿಯ ಸಹೋದರನನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.