ಹಾಸನ : ಹಾಸನದ ಬೇಲೂರು ತಾಲೂಕಿನ ಸುತ್ತಮುತ್ತ ಹಳ್ಳಿಗಳಲ್ಲಿ ಒಂಟಿ ಸಲಗ ಓಡಾಡುತ್ತಿದ್ದು, ಗ್ರಾಮಸ್ಥರಲ್ಲಿ ಆಂತಕ ಮನೆ ಮಾಡಿದೆ. ಬೇಲೂರು ತಾಲೂಕಿನ ಕೋಡಿಗನಗಳ್ಳಿ ಬಳಿ ಕಾಡಾನೆ ಬೀಡು ಬಿಟ್ಟಿದ್ದು, ಹಳ್ಳಿಗಳ ಅಕ್ಕಪಕ್ಕದ ಕಾಫಿ ತೋಟಗಳಲ್ಲಿ ಒಂಟಿ ಸಲಗ ಭೀಮನು ಅಡ್ಡಾಡುತ್ತಿದ್ದಾನೆ.
ಒಂಟಿಸಲಗದ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ್ದು, ಕಾಡಾನೆ ಭಯದಿಂದ ಕಾಫಿ ಕುಯ್ಲು ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾಫಿ ತೋಟದಲ್ಲಿರುವ ಹೊಂಡದಲ್ಲಿ ನೀರು ಕುಡಿದು ನಿಂತು ಭೀಮ ಓಡಾಡ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಒಂಟಿಸಲಗದ ಬಗ್ಗೆ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ಜನರಿಗೆ ಮಾಹಿತಿ ನೀಡುತ್ತಿದ್ದಾರೆ. ಯಾವುದೇ ಅನಾಹುತವಾಗದಂತೆ ಒಂಟಿಸಲಗದ ಬೆನ್ನು ಬಿದ್ದಿರುವ ಇಟಿಎಫ್ ಸಿಬ್ಬಂದಿ, ಭೀಮನ ಚಲನವಲನದ ಬಗ್ಗೆ ಸ್ಥಳೀಯರಿಗೆ ಮೈಕ್ ಮೂಲಕ ಮಾಹಿತಿ ನೀಡುತ್ತಿದ್ದಾರೆ.