ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಭಾರತೀಯ ಜನತಾ ಪಾರ್ಟಿ ಲೋಕಸಭಾ ಚುನಾವಣಾ ಟಿಕೆಟ್ ನೀಡಿದೆ. ಮಂಡಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಕಂಗನಾ ಈಗಾಗಲೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಿಸಿಕೊಂಡಿದ್ದಾರೆ. ಈ ಮಧ್ಯೆ ಕಂಗನಾ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನವೊಂದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ನಟಿ ಕಂಗನಾ ರಣಾವತ್ ಅವರು ಸಂದರ್ಶನವೊಂದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರನ್ನು ಭಾರತದ ಮೊದಲ ಪ್ರಧಾನಿ ಎಂದು ಹೇಳಿದ್ದಾರೆ. ಈ ಹೇಳಿಕೆಯೇ ಸದ್ಯ ವೈರಲ್ ಆಗಿದೆ.
ಕಂಗನಾ ರಣಾವತ್ರ ಪ್ರಕಾರ ‘ಭಾರತಕ್ಕೆ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಆಗಿದ್ದರು. ಸರ್ದಾರ್ ಪಟೇಲ್ ಅವರಿಗೆ ಇಂಗ್ಲಿಷ್ ಮಾತನಾಡಲು ಬಾರದ ಕಾರಣ ಅವರು ಪ್ರಧಾನಿ ಆಗಲಿಲ್ಲ’ ಎಂದು ಹೇಳಿದ್ದಾರೆ.
ಭಾರತದ ಮೊದಲ ಪ್ರಧಾನ ಮಂತ್ರಿ ಹೇಳಿಕೆ ನೀಡಿದ ಬಳಿಕ ಕಂಗನಾ ರಣಾವತ್ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಹಲವಾರು ನೆಟಿಗರು ಕಮೆಂಟ್ ಮಾಡುವ ಮೂಲಕ ಕಂಗನಾ ರಣಾವತ್ ಅವರಿಗೆ ಪಾಠ ಮಾಡಿದ್ದಾರೆ.
ಇಷ್ಟೆಲ್ಲಾ ಆದ ಬಳಿಕ ನಟಿ ಕಂಗನಾ ರಣಾವತ್ ಅವರು ಸ್ಪಷ್ಟನೆ ನೀಡಿದ್ದು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಲಿಕೆಗಾರರಿಗೆ ಕೆಲವು ಸಾಮಾನ್ಯ ಜ್ಞಾನ ಎಂದು ಬರೆದುಕೊಂಡಿದ್ದಾರೆ. ಸಿಂಗಾಪುರದಲ್ಲಿ ಮುಕ್ತ ಭಾರತಕ್ಕಾಗಿ ಸರ್ಕಾರವನ್ನು ರಚಿಸಿದ ನಂತರ ಸುಭಾಷ್ ಚಂದ್ರ ಬೋಸ್ ಅವರು ತಮ್ಮನ್ನು ತಾವು ಪ್ರಧಾನಿ ಎಂದು ಘೋಷಿಸಿಕೊಂಡಿದ್ದರು ಎನ್ನುವ ಸ್ಕ್ರೀನ್ಶಾಟ್ ಅನ್ನು ಕಂಗನಾ ಶೇರ್ ಮಾಡಿದ್ದಾರೆ.