ದೊಡ್ಡಬಳ್ಳಾಪುರ: ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ಪಠ್ಯದ ಜೊತೆಗೆ ಯೋಗ, ಕ್ರೀಡೆ, ಕರಾಟೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತೆ ಎಂದು ಶಾಲೆಯ ಕಾರ್ಯದರ್ಶಿ ಕೆ.ಜಿ ಶ್ರೀನಿವಾಸ ಮೂರ್ತಿ ತಿಳಿಸಿದರು.
ಭಾನುವಾರ ಶಾಲಾ ವಾರ್ಷಿಕೋತ್ಸವ ಆಯೋಜನೆ ಮಾಡಿ ಮಾತನಾಡಿದ ಇವರು 2006 ರಲ್ಲಿ ಸಾಧನ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆ ಆರಂಭವಾಗಿದೆ. 1 ರಿಂದ 10 ನೇ ತರಗತಿವರೆಗೆ 1041 ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ 18 ವರ್ಷಗಳಿಂದ ಗ್ರಾಮೀಣ ,ಅರೆ ನಗರ ಭಾಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಪ್ರತಿ ವರ್ಷ ನಮ್ಮ ಶಾಲೆಯಲ್ಲಿ 100% ಪಲಿತಾಂಶ ಬರುತ್ತಿದೆ ಎಂದು ಹೇಳಿದರು.
ಇದೆ ವೇಳೆ ಜೂನಿಯರ್ ಪುನೀತ್ ರಾಜ್ ಕುಮಾರ್ ಎಂದೆ ಹೆಸರು ವಾಸಿಯಾಗಿರುವ ಸಕಲೇಷಪುರದ ಅಪ್ಪು ಮಾತನಾಡಿ ಡಾ.ಪುನೀತ್ ರಾಜ್ ಕುಮಾರ್ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಜೀವನದಲ್ಲಿ ಪ್ರತಿಯೊಬ್ಬರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.ಪೋಷಕರನ್ನು ಅನಾಥಶ್ರಮಕ್ಕೆ ಕಳುಹಿಸಬೇಡಿ,ಶಿಕ್ಷಣದ ಜೊತೆ ಮಾನವೀಯ ಗುಣಗಳು,ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ರಾಜ್ಯದ ವಿಜ್ಞಾನ ಸಂಪನ್ಮೂಲ ವ್ಯಕ್ತಿ ಸತೀಶ್ ಕುಮಾರ್ ಮಾತನಾಡಿ ನೂರು ದೇವಸ್ಥಾನ ನೀರ್ಮಾಣ ಮಾಡುವ ಬದಲು ಒಂದು ಶಾಲೆ ನಿರ್ಮಾಣ ಮಾಡಿ ಎಂಬ ನಾಣ್ಣುಡಿಯಂತೆ ಗ್ರಾಮೀಣ ಭಾಗದಲ್ಲಿ ಉತ್ತಮ ಶಾಲೆ ನಿರ್ಮಾಣ ಮಾಡಿದ್ದಾರೆ.
ಮಕ್ಕಳನ್ನು ಕ್ರೀಯಾಶೀಲ,ಚಿಂತನಶೀಲರಾಗಿ ಮಾಡುವಲ್ಲಿ ಶ್ರೀನಿವಾಸ್ ಮೂರ್ತಿಯವರು ಶ್ರಮಿಸುತ್ತಿದ್ದಾರೆ. ಬಾಷೆ ಕಲಿಯಲು ಸುಂದರವಾದ ವಾತವರಣ ಬೇಕು ಅದು ಈ ಶಾಲೆಯಲ್ಲಿ ಕಲ್ಪಿಸಲಾಗಿದೆ ಎಂದು ಗುಣಗಾನ ಮಾಡಿದರು. ವೇದಿಕೆ ಕಾರ್ಯಕ್ರಮ ಮುಗಿದ ನಂತರ ಪಡುವಣದಲಿ ಸೂರ್ಯರಶ್ಮಿ ಇಳೆಯ ಗರ್ಭ ಸೇರಿದಂತೆ ಇಲ್ಲಿ ಲಿಟ್ಲ್ ಮಾಸ್ಟರುಗಳ ಕಲರವ ಮೈದೆಳೆದು, ಸಂಭ್ರಮ ಗರಿಬಿಚ್ಚಿತು. ಬಣ್ಣದೋಕುಳಿ ಚೆಲ್ಲುವ ದೀಪದ ಬೆಳಕಲ್ಲಿ ಮುದ್ದು ಮಕ್ಕಳ ನರ್ತನ ಪೋಷಕ-ಸಭಿಕರ ಮೈ ನವಿರೇಳಿಸಿತು.
‘ಸಂಕಲ್ಪ’ ತೊಟ್ಟು ಅಖಾಡಕ್ಕಿಳಿದ ಚಿಣ್ಣರು ತಮ್ಮಲ್ಲಿನ ಪ್ರತಿಭೆಯನ್ನು ನೃತ್ಯ ಮಾಡುವುದರ ಮೂಲಕ ವೇದಿಕೆಯಲ್ಲಿ ಓರೆಗಚ್ಚಿದರು.ಕಾಂತಾರ,ಭಜರಂಗಿ,ಕಾಂಚನಾ ಸಿನಿಮಾದ ನೃತ್ಯಕ್ಕೆ ಪೋಷಕರು ಪಿಧಾ ಆದರು. ಬೊಂಬೆ ಹೇಳುತೈತೆ ನೃತ್ಯಕ್ಕೆ ಮೊಬೈಲ್ ನಲ್ಲಿ ಟಾರ್ಚ್ ಹಾಕುವ ಮೂಲಕ ಡಾ.ಪುನೀತ್ ರಾಜ್ ಕುಮಾರ್ ಗೆ ಗೌರವ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯಿಂದ ಗ್ರಾಮದ ಗಣ್ಯರು,ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಿ ಗೌರವಿಸಲಾಯಿತು.