ಮಧ್ಯಪ್ರದೇಶ:- ಇಲ್ಲಿನ ಬಂಚದ ಸಮುದಾಯದಲ್ಲಿ ಹೆಣ್ಣು ಮಗು ಹುಟ್ಟಿದರೆ ಸಂಭ್ರಮಾಚರಣೆ ಮಾಡಲಾಗುತ್ತದೆ. ಆದರೆ, ಸಂಭ್ರಮವು ಆದಷ್ಟು ಬೇಗ ಅವರನ್ನು ನರಕಕ್ಕೆ ದೂಡುತ್ತದೆ ಎಂಬುದು ತಡವಾಗಿ ಮನವರಿಕೆಯಾಗುತ್ತದೆ. ಏಕೆಂದರೆ, ಈ ಸಮುದಾಯದಲ್ಲಿ ಬಹುತೇಕ ಮಂದಿ ಲೈಂಗಿಕ ಕಾರ್ಯಕರ್ತೆಯರು. ವೇಶ್ಯಾವಾಟಿಕೆಯೇ ಜೀವನದ ಆಧಾರವಾಗಿರುವ ಬಂಚದ ಸಮುದಾಯದಲ್ಲಿ ಹೆಣ್ಣು ಮಗುವಿನ ಜನನವನ್ನು ಆಚರಿಸಲಾಗುತ್ತದೆ.
ಮಧ್ಯಪ್ರದೇಶದ ರಾಟ್ಲಮ್, ಮಂದಸೂರ್ ಮತ್ತು ನೀಮುಚ್ ಜಿಲ್ಲೆಗಳಲ್ಲಿ ಈ ಬಂಚದ ಸಮುದಾಯ ಕಂಡುಬರುತ್ತದೆ. ತಲೆಮಾರುಗಳಿಂದ ವೇಶ್ಯಾವಾಟಿಕೆ ಈ ಸಮುದಾಯದ ಮುಖ್ಯ ಜೀವನೋಪಾಯವಾಗಿದೆ. ಈ ಸ್ಥಳವು ಅಫೀಮು ಕೃಷಿಗೆ ಕುಖ್ಯಾತವಾಗಿದ್ದು, ಇಲ್ಲಿಯ ಗಂಡಸರ ತಮ್ಮ ಜೀವನಕ್ಕಾಗಿ ಹೆಣ್ಣಿನ ಆದಾಯವನ್ನೇ ಅವಲಂಬಿಸಿದ್ದಾರೆ. ವೇಶ್ಯಾವಾಟಿಕೆ ಅಪರಾಧವಾಗಿದ್ದರೂ, ಈ ವೃತ್ತಿಯನ್ನು ಇಲ್ಲಿನ ಸಮುದಾಯವು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಇಲ್ಲಿ ಲೈಂಗಿಕತೆಗಾಗಿ ಮಾನವ ಕಳ್ಳಸಾಗಣೆ ಕೂಡ ಸಕ್ರಿಯವಾಗಿದೆ. ಸಮುದಾಯದ ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮಾರಾಟವಾಗುತ್ತಿರುವ ಬಗ್ಗೆ ವರದಿಗಳಿವೆ.
ಮೂರು ಜಿಲ್ಲೆಗಳಲ್ಲಿ 75 ಹಳ್ಳಿಗಳಲ್ಲಿ ಹರಡಿರುವ ಬಂಚದ ಸಮುದಾಯವು ಒಟ್ಟು 23,000 ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ ಕನಿಷ್ಠ 65 ಪ್ರತಿಶತ ಮಹಿಳೆಯರಿದ್ದಾರೆ. 2015ರಲ್ಲಿ ಮಧ್ಯಪ್ರದೇಶದ ಮಹಿಳಾ ಸಬಲೀಕರಣ ಇಲಾಖೆ ಮಂಡಸೂರಿನ 38 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿತ್ತು. ಜಿಲ್ಲೆಯಲ್ಲಿ ಈ ಸಮುದಾಯದ ಜನಸಂಖ್ಯೆಯು 3,435 ಎಂದು ಕಂಡುಬಂದಿದೆ. ಅದರಲ್ಲಿ 2,243 ಮಹಿಳೆಯರು ಮತ್ತು 1,192 ಪುರುಷರು. ಅಂದರೆ ಪ್ರತಿ ಪುರುಷನಿಗೆ ಇಬ್ಬರು ಮಹಿಳೆಯರು. 2012ರಲ್ಲಿ ನೀಮುಚ್ ಪ್ರದೇಶದ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಾಯಿತು. ಇಲ್ಲಿ 3,595 ಮಹಿಳೆಯರು ಮತ್ತು 2,770 ಪುರುಷರಿರುವುದು ಕಂಡುಬಂದಿತು.
ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಇಂತಹ ಪ್ರದೇಶಗಳಲ್ಲಿ ಏಡ್ಸ್ ಹರಡುವಿಕೆ ಹೆಚ್ಚಾಗಿದೆ.