ಪ್ರಸಕ್ತ ಸಾಲಿನ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ನೀಡಿರುವ ಹೀನಾಯ ಪ್ರದರ್ಶನ ಕಾರಣ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಭಾರತದ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಹಿಂದಿರುಗುವುದು ಕಷ್ಟ ಎಂಬಂತ್ತಾಗಿದೆ. ಸದ್ಯ ಟೀಮ್ ಇಂಡಿಯಾ ತವರಿನಲ್ಲಿ ಪ್ರವಾಸಿ ಬಾಂಗ್ಲಾದೇಶ ಎದುರು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 19 ರಂದು ಶುರುವಾಗಲಿರುವ ಪ್ರಥಮ ಟೆಸ್ಟ್ ಪಂದ್ಯಕ್ಕೆ ಮಾತ್ರವೇ ಬಿಸಿಸಿಐ, ಟೀಮ್ ಇಂಡಿಯಾ ಪ್ರಕಟ ಮಾಡಿದೆ. ಎರಡನೇ ಟೆಸ್ಟ್ಗೆ ತಂಡ ಪ್ರಕಟ ಮಾಡುವುದು ಬಾಕಿಯಿದ್ದು, ಶ್ರೇಯಸ್ ಅಯ್ಯರ್ ಸ್ಥಾನ ಪಡೆಯುವುದು ಅನುಮಾನ ಎಂಬಂತ್ತಾಗಿದೆ.
ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಭಾರತ ತಂಡ ತಾಯ್ನಾಡಿನಲ್ಲಿ ನ್ಯೂಜಿಲೆಂಡ್ ಎದುರು 3 ಪಂದ್ಯಗಳ ಸರಣಿ ಆಡಲಿದೆ. ದುಲೀಪ್ ಟ್ರೋಫಿ ಟೂರ್ನಿಯ 3ನೇ ಸುತ್ತಿನ ಪಂದ್ಯದಲ್ಲೂ ಶ್ರೇಯಸ್ ಅಯ್ಯರ್ ದೊಡ್ಡ ಸ್ಕೋರ್ ಮಾಡದೇ ಇದ್ದರೆ, ಅವರ ಪಾಲಿಗೆ ಟೆಸ್ಟ್ ತಂಡಕ್ಕೆ ಹಿಂದಿರುಗುವ ಬಾಗಿಲು ಸಂಪೂರ್ಣ ಮುಚ್ಚಿದಂತ್ತಾಗಲಿದೆ. ಲಯ ಕಳೆದುಕೊಂಡಿರುವ ಆಟಗಾರರ ಆಯ್ಕೆ ಮಾಡಲಾಗುವುದಿಲ್ಲ ಎಂದು ಬಿಸಿಸಿಐ ಕೂಡ ಖಡಕ್ ಸಂದೇಶ ರವಾನಿಸಿಯಾಗಿದೆ.
“ಸದ್ಯಕ್ಕೆ ಶ್ರೇಯಸ್ ಅಯ್ಯರ್ಗೆ ಭಾರದ ಟೆಸ್ಟ್ ತಂಡದಲ್ಲಿ ಸ್ಥಾನವಿಲ್ಲ. ಯಾರ ಸ್ಥಾನದಲ್ಲಿ ಅವರು ಆಡುತ್ತಾರೆ? ಅಲ್ಲದೆ ಅವರ ಶಾಟ್ ಸೆಲೆಕ್ಷನ್ ಸರಿಯಿಲ್ಲ. ಇದನ್ನು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಮತ್ತೆ ನೋಡಿದ್ದೇವೆ. ಎರಡನೇ ಪಂದ್ಯದಲ್ಲಿ ಕ್ರೀಸ್ನಲ್ಲಿ ಭದ್ರವಾಗಿ ನಿಂತಿದ್ದ ಸಂದರ್ಭದಲ್ಲಿ ಸ್ಪಿನ್ನರ್ ಶಾಮ್ಸ್ ಮುಲಾನಿ ಎದುರು ಅನಗತ್ಯ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ಫ್ಲಾಟ್ ಪಿಚ್ನಲ್ಲಿ ಬ್ಯಾಟ್ ಮಾಡುವಾಗ ಎಲ್ಲವನ್ನು ಬಳಸಿಕೊಂಡು ದೊಡ್ಡ ಸ್ಕೋರ್ ಮಾಡಬೇಕು,” ಎಂದು ಬಿಸಿಸಿಐ ಅಧಿಕಾರಿ ಒಬ್ಬರು ಟೆಲಿಗ್ರಾಫ್ಗೆ ಮಾಹಿತಿ ನೀಡಿದ್ದಾರೆ.