ಅಹಮದಾಬಾದ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮಮಂದಿರದ (Ram Mandir in Uttar Pradesh’s Ayodhya) ಕಾಮಗಾರಿ ಅಂತಿಮ ಹಂತದಲ್ಲಿದ್ದು, ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ದೇಶದ ವಿವಿಧ ಭಾಗಗಳ ಜನರು ಅಯೋಧ್ಯೆಗೆ ತಮ್ಮ ಕೈಲಾದಷ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಅಂತೆಯೇ ಇದೀಗ ಅಹಮದಾಬಾದ್ನ ಸಂಸ್ಥೆಯೊಂದು ದೇಗುಲಕ್ಕೆ ಉಡುಗೊರೆಯಾಗಿ ನೀಡಲೆಂದು ಮೆಗಾ ಡ್ರಮ್ (ದೊಡ್ಡ ನಗಾರಿ) ಅನ್ನು ಸಿದ್ಧಪಡಿಸಿದೆ.
ಅಖಿಲ ಭಾರತ ದಗ್ಬರ್ ಸಮಾಜ ತಯಾರಿಸಿದ ಈ ವಿಶೇಷ ಡ್ರಮ್ (Mega Drum) ಬರೋಬ್ಬರಿ 450 ಕೆ.ಜಿ ತೂಗುತ್ತದೆ. ಇದನ್ನು 2024 ರ ಜನವರಿ 22 ರ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಅಯೋಧ್ಯೆಗೆ ತಲುಪಿಸುವ ಪ್ಲ್ಯಾನ್ ಕೂಡ ನಡೆಯುತ್ತಿದೆ. ಈ ಡ್ರಮ್ ಅಥವಾ ನಗಾರಿಯನ್ನು ಕೊಂಡೊಯ್ಯಲು ಸಂಸ್ಥೆಯು ಈಗಾಗಲೇ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದು, ಅದಕ್ಕಾಗಿಯೇ 700 ಕೆ.ಜಿ ತೂಕದ ವಿಶೇಷವಾದ ರಥವೊಂದನ್ನು (Power Steering Chariot) ಕೂಡ ರೆಡಿ ಮಾಡುತ್ತಿದೆ.
ಈ ಕುರಿತು ದಗ್ಬರ್ ಸಮಾಜದ (Dagbar Samaj) ಪ್ರತಿನಿಧಿ ಅಂಬಾಲಾಲ್ ದಗ್ಬರ್ ಪ್ರತಿಕ್ರಿಯಿಸಿ, ರಾಮ ಮಂದಿರಕ್ಕಾಗಿ ನಿರ್ಮಿಸಲಾಗುತ್ತಿರುವ ಈ ಡ್ರಮ್ನಲ್ಲಿ ಕಬ್ಬಿಣದ ತಟ್ಟೆಗಳನ್ನು ಬಳಸಲಾಗಿದೆ. ಹೀಗಾಗಿ ಇದು ಸಾವಿರಾರು ವರ್ಷಗಳ ಕಾಲ ಬಾಳಿಕೆ ಬರಲಿದೆ ಎಂದು ತಿಳಿಸಿದ್ದಾರೆ. ಇದೇ ಸಂಸ್ಥೆಯ ಮತ್ತೋರ್ವ ಸದಸ್ಯ ದೀಪಕ್ ದಗ್ಬರ್ ಮಾತನಾಡಿ, ಈ ಡ್ರಮ್ ತಯಾರಿಕೆಯ ಬಹುತೇಕ ಕೆಲಸ ಮುಗಿದಿದ್ದು, ಇನ್ನು ಇದರ ಹೊರ ಭಾಗದಲ್ಲಿ ತಾಮ್ರದ ಫಲಕಗಳನ್ನು ಕೆತ್ತುವ ಪ್ರಕ್ರಿಯೆ ಬಾಕಿ ಉಳಿದಿದ್ದು,
ಕೆಲವೇ ದಿನಗಳಲ್ಲಿ ಈ ಕೆಲಸವೂ ಮುಗಿಯುತ್ತದೆ. ಇದಕ್ಕೆ ಚಿನ್ನ ಮತ್ತು ಬೆಳ್ಳಿಯ ಲೇಪನ ಬಳಕೆ ಮಾಡಲಾ ಗುತ್ತದೆ. ಒಟ್ಟಾರೆಯಾಗಿ ಈ ಮೆಗಾ ಡ್ರಮ್ ಪೂರ್ಣಗೊಳಿಸಲು ಎರಡೂವರೆ ತಿಂಗಳು ತೆಗೆದುಕೊಂಡಿದ್ದು, ಮುಂದಿನ ವಾರದ ವೇಳೆಗೆ ಡ್ರಮ್ ಒಯ್ಯಲು ರಥ ಕೂಡ ಸಿದ್ಧವಾಗಲಿದೆ ಎಂದು ಅವರು ವಿವರಿಸಿದರು. ಸದ್ಯ ಅಹಮದಾಬಾದ್ನ ದ್ರ್ಯಾಪುರ್ನಲ್ಲಿ ಡ್ರಮ್ ಈಗಾಗಲೇ ಆಕರ್ಷಣೆಯ ಬಿಂದುವಾಗಿದೆ. ಜನವರಿ 8 ರಂದು ಅಯೋಧ್ಯೆಗೆ ಕಳುಹಿಸುವ ಮೊದಲು ಡ್ರಮ್ ನೋಡಲು ಸಾವಿರಾರು ಜನ ಮುಗಿಬೀಳುತ್ತಿದ್ದಾರೆ.