ಅನುಭವಿ ಡಾಕ್ಟರ್ ಗಳೇ ಕಂಡುಹಿಡಿಯಲು ಹೆಣಗಾಡಿದ ಕಾಯಿಲೆಯನ್ನು ಹತ್ತು ಸೆಕೆಂಡ್ ನಲ್ಲಿ ಕಂಡು ಹಿಡಿದ ಮನೆಕೆಲಸದ ಅಜ್ಜಿ
ಸಾಕಷ್ಟು ವರ್ಷ ಅನುಭವ ಹೊಂದಿದ ಡಾಕ್ಟರ್ ಗಳೇ ಕಂಡು ಹಿಡಿಯಲು ಸಾಧ್ಯವಾಗದ ರೋಗವನ್ನು ಜಸ್ಟ್ 10 ಸೆಕೆಂಡ್ ನಲ್ಲಿ ಮನೆ ಕೆಲಸದ ಅಜ್ಜಿ ಕಂಡು ಹಿಡಿದಿರುವ ಘಟನೆ ಕೇರಳದಲ್ಲಿ ನಡೆದಿದೆ. ಈ ಘಟನೆಯನ್ನು ವೈದ್ಯರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಲಿವರ್ ವೈದ್ಯರು ಎಂದೇ ಕರೆಯಲಾದ ಸಿರಿಯಾಕ್ ಅಬ್ಬಿ ಫಿಲಿಪ್ಸ್ ತಮ್ಮ ಕುಟುಂಬ ಸದಸ್ಯರಲ್ಲೊಬ್ಬರ ರೋಗ ನಿರ್ಣಯವನ್ನು ಪತ್ತೆಹಚ್ಚಲಾಗದೇ ತಲೆಕೆಡಿಸಿಕೊಂಡಿದ್ದರು. ಅವರ ಕುಟುಂಬದ ಹಿರಿಯ ಸದಸ್ಯರೊಬ್ಬರಿಗೆ ಶೀತ, ವಿಪರೀತ ಆಯಾಸ, ಸಂಧಿವಾತ, ವಿಲಕ್ಷಣವಾದ ದದ್ದುಗಳೊಂದಿಗೆ ಜ್ವರ ಕಂಡುಬಂದಿತ್ತು.
ವೈದ್ಯರು ರೋಗಿಯ ವೈರಲ್ ಪರೀಕ್ಷೆ, ಹೆಪಟೈಟೀಸ್, ಕೋವಿಡ್-19, ಇನ್ಫ್ಲುಯೆನ್ಸ ಮತ್ತು ಡೆಂಗ್ಯೂ ಮತ್ತು ಎಪ್ಸ್ಟೀನ್ ಬಾರ್ ವೈರಸ್ವರೆಗಿನ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿದರು. ಆದರೆ ಯಾವ ಪರೀಕ್ಷೆಯೂ ಪಾಸಿಟಿವ್ ಆಗಿ ಬಂದಿರಲಿಲ್ಲ. ರೋಗಿಯ ರೋಗ ನಿರ್ಣಯ ತುಂಬಾ ತಲೆನೋವಾಗಿ ವೈದ್ಯರನ್ನು ಕಾಡಿತ್ತು. ಆದರೆ ಅವರ ಮನೆಗೆಲಸದವರು ಬರೇ 10 ಸೆಕೆಂಡ್ಗಳಲ್ಲಿ ರೋಗ ನಿರ್ಣಯ ಮಾಡಿದ್ದು, ಇದರಿಂದ ನಾನು ಆಶ್ಚರ್ಯಚಕಿತನಾದೆ ಎಂದು ತಿಳಿಸಿದ್ದಾರೆ.
ಇಷ್ಟೊಂದು ವರ್ಷದ ವೈದ್ಯಕೀಯ ಪರಿಣಿತಿ ಹೊಂದಿದ್ದರೂ ನನ್ನಿಂದ ಸಾಧ್ಯವಾಗದ ಕೆಲಸವನ್ನು ನಮ್ಮ ಮನೆಗೆಲಸವರು ಮಾಡಿದ್ದಾರೆ ಇದು ಹೆಮ್ಮೆಯ ವಿಚಾರ ಎಂದು ತಿಳಿಸಿದ್ದಾರೆ.
ಅವರ ಮನೆಗೆಲಸದವರು ನನ್ನ ಮೊಮ್ಮಕ್ಕಳಲ್ಲಿ ಕೂಡ ಇಂತಹುದೇ ರೋಗ ಲಕ್ಷಣಗಳು ಕಂಡುಬಂದಿದ್ದು ಸ್ಥಳೀಯ ಭಾಷೆಯಲ್ಲಿ ಅಂಜಾಂಪನಿ (ಐದನೇ ರೋಗ) ತದನಂತರ ವೈದ್ಯರು ಪಾರ್ವೊವೈರಸ್ ಬಿ 19 ಟೆಸ್ಟ್ ಮಾಡಿಸಿದಾಗ ಅದು ಪಾಸಿಟಿವ್ ಎಂದು ಬಂದಿತು. 17 ವರ್ಷದ ವೈದ್ಯಕೀಯದ ಅನುಭವ ನನ್ನ ಮನೆಗೆಲಸದವರ ಜ್ಞಾನದ ಮುಂದೆ ಏನೂ ಇಲ್ಲ ಎಂದು ವೈದ್ಯರು ವಿನಮ್ರರಾಗಿ ಬರೆದುಕೊಂಡಿದ್ದಾರೆ.
ವೈದ್ಯರ ಎಕ್ಸ್ ಪೋಸ್ಟ್ಗೆ ಹಲವಾರು ಬಳಕೆದಾರರು ಅನಿಸಿಕೆ ವ್ಯಕ್ತಪಡಿಸಿದ್ದು, ಕಾಮೆಂಟ್ಗಳು ಹಾಗೂ ಮೆಚ್ಚುಗೆಯ ಮಾತುಗಳನ್ನು ಬಳಕೆದಾರರು ತಿಳಿಸಿದ್ದಾರೆ.
ನಮ್ಮ ಪ್ರಾಯೋಗಿಕ ಜ್ಞಾನವು ಥಿಯರಿ ಅನುಭವವನ್ನು ಮೀರಿಸುತ್ತದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದು, ಜ್ಞಾನವು ಯಾವ ಮೂಲದಿಂದ ಬಂದಿದೆ ಎಂಬುದನ್ನು ಪರಿಗಣಿಸದೆ ಅದನ್ನು ಸ್ವೀಕರಿಸುವ ಹಾಗೂ ಗೌರವಿಸುವ ಮನೋಭಾವನೆಯನ್ನು ಈ ಘಟನೆ ತೋರಿಸುತ್ತದೆ ಎಂದು ಇನ್ನೊಬ್ಬ ಬಳಕೆದಾರರು ತಿಳಿಸಿದ್ದಾರೆ.
ಅಂಜಾಂಪನಿ ಅಥವಾ ಫಿಪ್ತ್ ಡಿಸೀಸ್ ರೋಗ ಲಕ್ಷಣಗಳೇನು?
ಮೆಡ್ಲೈನ್ ಪ್ಲಸ್ ವಿವರಿಸಿದಂತೆ ಅಂಜಾಂಪನಿ ಅಥವಾ ಫಿಪ್ತ್ ಡಿಸೀಸ್ ಎಂಬುದು ಮಾನವ ಪಾರ್ವೊವೈರಸ್ B19 ನಿಂದ ಉಂಟಾಗುತ್ತದೆ. ಇದು ಹಿರಿಯರಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಸಾಮಾನ್ಯವಾಗಿದೆ.
ಕೆಮ್ಮಿದಾಗ ಇಲ್ಲವೇ ಸೀನಿದಾಗ ಮೂಗು ಹಾಗೂ ಬಾಯಿಯಲ್ಲಿರುವ ದ್ರವದ ಮೂಲಕ ಹರಡುತ್ತದೆ. ಕೆನ್ನೆಗಳಲ್ಲಿ ಗಾಢವಾದ ಕೆಂಪು ದದ್ದುಗಳು ಕಂಡುಬರುತ್ತದೆ, ತದನಂತರ ಇದು ದೇಹದಾದ್ಯಂತ ಕಾಣಿಸಿಕೊಳ್ಳುತ್ತದೆ. ಬಳಿಕ ಜ್ವರದ ಇನ್ನಿತರ ಲಕ್ಷಣಗಳು ಕಂಡುಬರಬಹುದು. 5 ರಿಂದ 15 ವರ್ಷ ವಯಸ್ಸಿನ ಮಕ್ಕಳಲ್ಲಿ ಈ ರೋಗ ಸಾಮಾನ್ಯವಾಗಿದ್ದು, ಒಮ್ಮೊಮ್ಮೆ ವಯಸ್ಕರಿಗೂ ಈ ರೋಗ ಹರಡುವ ಸಂಭವವಿರುತ್ತದೆ.