1939ರ ತೆರೆಕಂಡ ಅಮೆರಿಕನ್ ಸಿನಿಮಾ ‘ದಿ ವಿಜರ್ಡ್ ಆಫ್ ಓಝ್’ನಲ್ಲಿ ನಟಿ ಜ್ಯೂಡಿ ಗಾರ್ಲೆಂಡ್ ಧರಿಸಿದ್ದ ಐತಿಹಾಸಿಕ ರೂಬಿ ಶೂ ಬರೋಬ್ಬರಿ 28 ಮಿಲಿಯನ್ ಡಾಲರ್ಗೆ ಅಂದರೆ 237 ಕೋಟಿ ಭಾರತೀಯ ರೂಪಾಯಿಗೆ ಹರಾಜಿಗಿದೆ.
ಜ್ಯೂಡಿ ಗಾರ್ಲೆಂಡ್ ಧರಿಸಿದ್ದ ಈ ಐತಿಹಾಸಿಕ ಶೂ ಎರಡು ದಶಕಗಳಿಗೂ ಹಿಂದೆ ಮ್ಯೂಸಿಯಂನಿಂದ ಕಳುವಾಗಿತ್ತು. ಆದರೆ ನಂತರ ಸಿಕ್ಕ ಅದನ್ನು ಹರಾಜಿಗಿಡಲಾಗಿತ್ತು. ಹರಾಜಿನಲ್ಲಿ 28 ಮಿಲಿಯನ್ ಡಾಲರ್ಗೆ ಈ ರೂಬಿ ಶೂ ಬಿಕರಿಯಾಗಿದೆ.
ಹರಾಜು ಸಂಸ್ಥೆ ಹೆರಿಟೇಜ್ ಆಕ್ಸನ್ಸ್ ಅವರು ಈ ಶೂ ಹರಾಜಿನಲ್ಲಿ 3 ಮಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪಡೆದುಕೊಳ್ಳಬಹುದೆಂದು ಅಂದಾಜಿಸಿದ್ದರು. ಆದರೆ ಯಾರು ಊಹಿಸಿರದ ರೀತಿಯಲ್ಲಿ 28 ಮಿಲಿಯನ್ ಡಾಲರ್ ಗೆ ಶೂ ಹರಾಜಾಗಿದೆ,
ಡಲ್ಲಾಸ್ ಮೂಲದ ಹರಾಜು ಸಂಸ್ಥೆಯ ಶುಲ್ಕವನ್ನು ಒಳಗೊಂಡಂತೆ ಅಪರಿಚಿತ ಖರೀದಿದಾರರು ಅಂತಿಮವಾಗಿ 32.5 ಮಿಲಿಯನ್ ಡಾಲರ್ ಹಣವನ್ನು ಈ ಶೂಗಾಗಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಕಳೆದ ತಿಂಗಳು ಈ ಶೂನ ಹರಾಜಿಗೆ ಆನ್ಲೈನ್ ಮೂಲಕ ಬಿಡ್ಡಿಂಗ್ ತೆರೆಯಲಾಗಿತ್ತು.
ಬಿಡ್ಡಿಂಗ್ ಆರಂಭಿಸುವ ಮೊದಲು ಇದಕ್ಕೆ 1.55 ಮಿಲಿಯನ್ ಬೆಲೆ ನಿಗದಿ ಮಾಡಲಾಗಿತ್ತು. ಇನ್ನು ಈ ಐತಿಹಾಸಿಕ ಶೂವನ್ನು ಖರೀದಿಸಲು 800 ಜನ ವೆಬ್ಸ್ಟೈಟನ್ನು ಟ್ರ್ಯಾಕ್ ಮಾಡಿದ್ದರು, ಅಲ್ಲದೇ ಹರಾಜು ಸಂಸ್ಥೆಯ ವೆಬ್ಸೈಟ್ಗೆ 43 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದ್ದರು ಎಂದು ಹರಾಜು ಸಂಸ್ಥೆಯ ಉಪ ಮುಖ್ಯಸ್ಥ ರಾಬರ್ಟ್ ವಿಲೊಂಸ್ಕಿ ಹೇಳಿದ್ದಾರೆ.
ಈ ಶೂವನ್ನು ಜ್ಯೂಡಿ ಗಾರ್ಲೆಂಡ್ ಅವರ ಹುಟ್ಟೂರಾದ ಗ್ರ್ಯಾಂಡ್ ರಾಪಿಡ್ನ ಮಿನ್ನೆಸೊಟದಲ್ಲಿರುವ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ 2005ರಲ್ಲಿ ಟೆರ್ರಿ ಜಾನ್ ಮಾರ್ಟಿನ್ ಎಂಬ ಕಳ್ಳ ಹ್ಯಾಮರ್ ಬಳಸಿ ಮ್ಯೂಸಿಯಂನ ಗ್ಲಾಸ್ ಒಡೆದು ಆ ಚಪ್ಪಲಿಯನ್ನು ಕದ್ದುಕೊಂಡು ಹೋಗಿದ್ದ. ನಂತರ 2018ರಲ್ಲಿ ಎಫ್ಬಿಐ ಈ ಶೂವನ್ನು ವಶಪಡಿಸಿಕೊಳ್ಳುವವರೆಗೂ ಈ ಶೂ ಎಲ್ಲಿತ್ತು ಎಂಬುದೇ ನಿಗೂಢ ರಹಸ್ಯವಾಗಿ ಉಳಿದಿತ್ತು. ಈ ಶೂವನ್ನು ಕದ್ದಿದ್ದ ಪ್ರಸ್ತುತ 77ವರ್ಷದವನಾಗಿರುವ ಮಾರ್ಟಿನ್ನ್ನು ಕೂಡ ಸಾರ್ವಜನಿಕವಾಗಿ ಕಳ್ಳ ಎಂಬುದನ್ನು ತೋರಿಸಿರಲಿಲ್ಲ, ಆದರೆ 2023ರ ಆಕ್ಟೋಬರ್ನಲ್ಲಿ ಆ ಪ್ರಕರಣದಲ್ಲಿ ಆತ ದೋಷಿ ಎಂದು ತಿಳಿದು ಬಂದಿತ್ತು.