ಇಸ್ಲಾಮಾಬಾದ್: ಹಿಂದೂ ಯುವತಿಯೊಬ್ಬರು ಪಾಕಿಸ್ತಾನದಲ್ಲಿ (Pakistan) ನಡೆಯುವ 2024ರ ಸಾರ್ವತ್ರಿಕ ಚುನಾವಣೆಗೆ (General Election) ನಾಮಪತ್ರ ಸಲ್ಲಿಸಿದ್ದಾರೆ ಎಂಬುದಾಗಿ ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
2024ರ ಫೆಬ್ರವರಿ 8 ರಂದು 16 ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆಗಳು ನಡೆಯಲಿವೆ. ಹೀಗಾಗಿ ಖೈಬರ್ ಪಖ್ತುಂಖ್ವಾದ ಬುನೇರ್ ಜಿಲ್ಲೆಯಲ್ಲಿ ಸವೀರಾ ಪ್ರಕಾಶ್ ಅವರು PK-25 ರ ಜನರಲ್ ಸೀಟ್ಗೆ ಅಧಿಕೃತವಾಗಿ ನಾಮಪತ್ರ (Nomination) ಸಲ್ಲಿಸಿದ್ದಾರೆ.
ಹಿಂದೂ ಸಮುದಾಯದ ಸದಸ್ಯೆಯಾಗಿರುವ ಸವೀರಾ ಪ್ರಕಾಶ್ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಟಿಕೆಟ್ನಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ಪ್ರಕಾಶ್ ಅವರ ತಂದೆ ಓಂ ಪ್ರಕಾಶ್ (ನಿವೃತ್ತ ವೈದ್ಯ) ಅವರು ಕಳೆದ 35 ವರ್ಷಗಳಿಂದ ಪಿಪಿಪಿಯ ಅಪ್ಪಟ ಸದಸ್ಯರಾಗಿದ್ದಾರೆ. ಹೀಗಾಗಿ ತಂದೆಯ ಹಾದಿಯಲ್ಲೇ ಸಾಗಲು ಮಗಳು ನಿರ್ಧಾರ ಮಾಡಿದ್ದಾರೆ
ಮುಂಬರುವ ಚುನಾವಣೆಗೆ ಸಾಮಾನ್ಯ ಸ್ಥಾನಕ್ಕೆ ಬುನರ್ ನಿಂದ ನಾಮಪತ್ರ ಸಲ್ಲಿಸಿರುವ ಮೊದಲ ಮಹಿಳೆ ಪ್ರಕಾಶ್ ಆಗಿದ್ದಾರೆ ಎಂದು ಸ್ಥಳೀಯ ರಾಜಕಾರಣಿ ಸಲೀಂ ಖಾನ್ ಹೇಳಿದ್ದಾರೆ.