ಕಲಬುರಗಿ:- ತಾಯಿಯನ್ನು ನಿಂದಿಸಿದನೆಂದು ಅಜ್ಜನನ್ನೇ ಮೊಮ್ಮಗ ಕೊಂದಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಘಟನೆ ತುಸು ತಡವಾಗಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಮೊಮ್ಮಗನನ್ನು ಆಕಾಶ್ (22) ಎಂದು ಗುರುತಿಸಲಾಗಿದೆ. ಘಟನೆ ಕಲಬುರಗಿ ತಾಲೂಕಿನ ಜವಳಗಾ (ಬಿ) ಗ್ರಾಮದಲ್ಲಿ ಸಂಭವಿಸಿದೆ.
ಮೃತ ಅಜ್ಜನನ್ನು ಸಿದ್ರಾಮಪ್ಪ (74) ಎಂದು ಗುರುತಿಸಲಾಗಿದೆ. ಆಕಾಶನ ತಾಯಿ ಸರೋಜಮ್ಮಳಿಗೆ ಅಜ್ಜ ಸಿದ್ರಾಮಪ್ಪ ನಿಂದಿಸಿರೋದೆ ಕೊಲೆಗೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. ಕಳೆದ ಸೋಮವಾರ ಸಿದ್ರಾಮಪ್ಪನ ಸಹೋದರಿ ಮೃತಪಟ್ಟ ಹಿನ್ನೆಲೆಯಲ್ಲಿ ಸಹೋದರರೆಲ್ಲರೂ ಸೇರಿ ಕುಮಸಿ ಗ್ರಾಮಕ್ಕೆ ತೆರಳಿದ್ದರು. ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಮರಳಿ ಊರಿಗೆ ಬರುವಾಗ ದಾರಿಯಲ್ಲಿ ಸರೋಜಮ್ಮ ಸಿದ್ರಾಮಪ್ಪನಿಗೆ ಕ್ರೂಸರ್ ವಾಹನದ ಟಾಪ್ ಮೇಲೆ ಕೂರುವಂತೆ ಸೂಚಿಸಿದ್ದರು. ತನಗೆ ವಯಸ್ಸಾಗಿದೆ. ಗಾಡಿ ಮೇಲೆ ಕೂರುವಂತೆ ಹೇಳುತ್ತಿಯಾ ಎಂದು ಸಿದ್ರಾಮಪ್ಪ ಸರೋಜಮ್ಮಳಿಗೆ ಅವಾಚ್ಯವಾಗಿ ನಿಂದಿಸಿದ್ದರು.
ಈ ಸಂಗತಿ ಸರೋಜಮ್ಮ ತನ್ನ ಮಗನಿಗೆ ಹೇಳಿದ್ದರು. ಇದೇ ಕಾರಣದಿಂದ ರೊಚ್ಚಿಗೆದ್ದ ಮಗ ಆಕಾಶ್ ಅಜ್ಜನನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತಂತೆ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.