ದೊಡ್ಡಬಳ್ಳಾಪುರ: ಪ್ರಪಂಚದಲ್ಲಿ ಜ್ಞಾನವೇ ಶ್ರೇಷ್ಠ. ಜ್ಞಾನವಂತರು ಎಲ್ಲಿ ಬೇಕಾದರೂ ಬದುಕಬಹುದು. ಜಗತ್ತಿನ ಸರ್ವಶ್ರೇಷ್ಠ ಎಂಜಿನಿಯರ್ ಆಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರು ಜನಿಸಿದ ಈ ಕಾಲಮಾನ ಜ್ಞಾನವಂತರ ಯುಗ ಎನಿಸಿದೆ ಎಂದು ಸಾಹಿತಿ, ನಟ ಮಹದೇವ್ ಚಿಕ್ಕಹೆಜ್ಜಾಜಿ ಅಭಿಪ್ರಾಯಪಟ್ಟರು. ನಗರದ ಪ್ರತಿಷ್ಠಿತ ಗುರುಕುಲ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ಸಂಭ್ರಮ 2023-24 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2019 ರಲ್ಲಿ ಪ್ರಾರಂಭವಾದ ಗುರುಕುಲ ಶಾಲೆ ನಾಲ್ಕೇ ವರ್ಷದಲ್ಲಿ ಎತ್ತರಕ್ಕೆ ಬೆಳೆದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಶಾಲೆ ನಡೆಸುವುದು ತುಂಬಾ ಕಷ್ಟದ ಕೆಲಸ. ಒಂದು ಸಂಸ್ಥೆ ಕಟ್ಟಲು ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಎಂಬ ನಾಲ್ಕು ಪಿಲ್ಲರ್ ಗಳು ಅತ್ಯಗತ್ಯ. ಆಡಳಿತ ಮಂಡಳಿ ಬದ್ಧತೆಯಿಂದಾಗಿ ಶಾಲೆಗೆ ಉತ್ತಮ ಹೆಸರು ಬಂದಿದೆ. ಮಕ್ಕಳಿಗೆ ಉತ್ತಮ ವಿದ್ಯೆ ನೀಡುವ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಚ್ಚು ತರಬೇತಿ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಶಾಲೆಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ಮಕ್ಕಳ ಎದುರು ಪೋಷಕರು ಜಗಳ ಆಡವಾಡಬಾರದು. ಜಗಳದ ವೇಳೆ ಬಳಸುವ ಕೆಟ್ಟ ಪದಗಳನ್ನು ಕೇಳುವ ಮಕ್ಕಳು ಶಾಲೆಯಲ್ಲಿ ಪ್ರಯೋಗಿಸುವ ಸಾಧ್ಯತೆ ಇರುತ್ತದೆ. ಸಾಂಸಾರಿಕ ಜೀವನದಲ್ಲಿ ಕಷ್ಟ ಸುಖ ಎಲ್ಲರಿಗೂ ಇರುತ್ತದೆ. ಹಾಗಾಗಿ ಜಗಳ ಆಡುವಾಗ ಮಕ್ಕಳಿರುವುದನ್ನು ಮರೆಯಬಾರದು. ಇನ್ನು ಶಾಲೆಯಲ್ಲಿ ಪೋಷಕರ ಸಭೆಗೆ ತಪ್ಪದೇ ಹಾಜರಾಗಿ ಮಗುವಿನ ಶೈಕ್ಷಣಿಕ ಪ್ರಗತಿ ವಿಚಾರಿಸಬೇಕು. ಮನೆಯ ಒಳಗೆ, ಹೊರಗೆ ಮಕಳ ಚಲನವಲನದ ಮೇಲೆ ಪೋಷಕರು ಸದಾ ಕಣ್ಣಿಡಬೇಕು ಎಂದು ಸಲಹೆ ನೀಡಿದರು.
ಶಾಲೆಯ ಅಧ್ಯಕ್ಷ ಎಸ್.ಆರ್.ರಮೇಶ್ ಮಾತನಾಡಿ, ಆಡಳಿತ ಮಂಡಳಿ ಮೇಲೆ ಪೋಷಕರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ಮಕ್ಕಳಿಗೆ ಅತ್ಯುನ್ನತ ವಿದ್ಯಾಭ್ಯಾಸದೊಂದಿಗೆ ಜಿವನಶೈಲಿಯನ್ನೇ ಬದಲಿಸಬೇಕೆಂದು ಪಣ ತೊಟ್ಟಿದ್ದೇವೆ. ತಾಲೂಕಿನಲ್ಲೇ ಗುರುಕುಲ ಶಾಲೆಯನ್ನು ನಂ.1 ಶಾಲೆಯನ್ನಾಗಿ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.
ಶಾಲೆಯ ಕಾರ್ಯದರ್ಶಿ ಎ.ಎನ್.ಲೋಕೇಶ್ ಕುಮಾರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಶ್ರೀ ರಾಜಘಟ್ಟ ಆಂಜನೇಯ ಸ್ವಾಮಿ ದೇವಾಲಯದ ಬಳಿ ಸಮಾನ ಮನಸ್ಕರು ಸೇರಿ ಶಾಲೆ ಕಟ್ಟುವ ನಿರ್ಧಾರ ಮಾಡಲಾಯಿತು. ರಾಜ್ಯವಲ್ಲದೇ ಬೇರೆ ರಾಜ್ಯಗಳ ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಕೊಡಿಸುವ ಜೊತೆಗೆ ಮಕ್ಕಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿದ ಪರಿಣಾಮ ಶಾಲಾ ವಿದ್ಯಾರ್ಥಿಗಳ ಸಂಖ್ಯೆ 1000ಕ್ಕೂ ಅಧಿಕವಾಗಿದೆ ಎಂದರು.
ಪ್ರಾಂಶುಪಾಲ ಕೆ.ಎಸ್.ಲೋಕೇಶ್ ವಾರ್ಷಿಕ ವರದಿ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಗಂಗಮಾರೇಗೌಡ, ಋತಿಕ್ ನರೇಂದ್ರ, ಕೆ.ಜಿ. ಶ್ರೀನಿವಾಸಮೂರ್ತಿ, ಉಪಪ್ರಾಂಶುಪಾಲ ಶರಣ್ ಬಿ.ವೈ ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಸಂಭ್ರಮ
ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವಾರ್ಷಿಕೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಕನ್ನಡದ ಜಾನಪದ ಸೊಗಡು, ಕರಾವಳಿ ಭೂತಾರಾಧನೆಯ ಕಂಪು, ಅಮ್ಮನ ಮಹತ್ವ ಸಾರುವ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ವೇದಿಕೆ ಮೇಲೆ ನೃತ್ಯದ ಜೊತೆಗೆ ತಮ್ಮ ಪ್ರತಿಭೆ ಪ್ರದರ್ಶಿಸಿ ಪೋಷಕರ ಮೆಚ್ಚುಗೆಗೆ ಪಾತ್ರರಾದರು.
ಎಸ್ಸೆಸ್ಸೆಲ್ಸಿ ಬಾಲಕ-ಬಾಲಕಿಯರ ಪೈಪೋಟಿಯ ನೃತ್ಯಕ್ಕೆ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆಯ ಮೂಲಕ ಪ್ರೋತ್ಸಾಹ ನೀಡಿದರು. ಆ ಬಳಿಕ ಆಡಳಿತ ಮಂಡಳಿ ನಿರ್ದೇಶಕರು, ಶಿಕ್ಷಕರೊಂದಿಗೆ ಶಾಲೆಯ ನೆನಪು ಸಾರುವ ಚಾಮಯ್ಯ ಮೇಸ್ಟ್ರು ಹಾಡಿಗೆ ವಿದ್ಯಾರ್ಥಿಗಳು ಹೆಜ್ಜೆಗೂಡಿಸಿ, ಆಡಳಿತ ಮಂಡಳಿಗೆ ಸ್ಮರಣಿಕೆ ನೀಡಿದರು