ನೋಯ್ಡಾ: ಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಸಮರೋಪಾದಿಯಲ್ಲಿ ಸಿದ್ಧತೆ ನಡೆಯುತ್ತಿದೆ. ಜ.22 ರಂದು ಭವ್ಯವಾದ ರಾಮಮಂದಿರ ಉದ್ಘಾಟನೆಯಾಗಲಿದ್ದು, ಅದೇ ದಿನ ರಾಮಲಲ್ಲಾ (ಬಾಲ ರಾಮ) ಗರ್ಭಗುಡಿಯಲ್ಲಿ ಆಸೀನರಾಗಲಿದ್ದಾರೆ. ರಾಮಮಂದಿರದ ಮೊದಲ ಮಹಡಿ ಸಂಪೂರ್ಣವಾಗಿ ಸಿದ್ಧವಾಗಿದ್ದು, ಉತ್ತರ ಪ್ರದೇಶ ಸರ್ಕಾರ ಶೀಘ್ರದಲ್ಲೇ ನೋಯ್ಡಾದಿಂದ ಅಯೋಧ್ಯೆಗೆ (Noida To Ayodhya) ಡೈರೆಕ್ಟ್ ಬಸ್ಗಳನ್ನು ಓಡಿಸಲು ಯೋಜಿಸುತ್ತಿದೆ.
ಈ ಸಂಬಂಧ UPSRTC ನೊಯ್ಡಾ ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ ಎನ್ಪಿ ಸಿಂಗ್ ಪ್ರತಿಕ್ರಿಯಿಸಿ, ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (UPSRTC) ನೋಯ್ಡಾ ಡಿಪೋ ಶೀಘ್ರದಲ್ಲೇ ಅಯೋಧ್ಯೆಗೆ ಡೈರೆಕ್ಟ್ ಬಸ್ಗಳನ್ನು ಪ್ರಾರಂಭಿಸಲಿದೆ. ಸದ್ಯ ನೋಯ್ಡಾ ಡಿಪೋದಿಂದ ಅಯೋಧ್ಯೆಗೆ ನೇರ ಬಸ್ಗಳಿಲ್ಲ. ಸಿಎನ್ಜಿ ಬಸ್ಗಳು ಒಂದೇ ಬಾರಿಗೆ ಅಷ್ಟು ದೂರ ಕ್ರಮಿಸಲು ಸಾಧ್ಯವಿಲ್ಲ. ಫುಲ್ ಟ್ಯಾಂಕ್ನಲ್ಲಿ ಸಿಎನ್ಜಿ ಬಸ್ 500 ಕಿ.ಮೀ ವರೆಗೆ ಕ್ರಮಿಸುತ್ತದೆ. ನೋಯ್ಡಾದಿಂದ ಅಯೋಧ್ಯೆಗೆ ಸುಮಾರು 650 ಕಿಮೀ ದೂರವಿದೆ. ಈ ಸಂದರ್ಭದಲ್ಲಿ ನೋಯ್ಡಾ ಡಿಪೋ ಲಕ್ನೋದಲ್ಲಿ ಸಿಎನ್ಜಿ (ಗ್ಯಾಸ್) ತುಂಬುವ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಟಿಕೆಟ್ ದರ: ಬಸ್ ಟಿಕೆಟ್ ದರ ಇನ್ನೂ ಅಂತಿಮಗೊಂಡಿಲ್ಲ. ಅಂತಿಮ ನಿರ್ಧಾರ ತೆಗೆದುಕೊಂಡ ನಂತರ ಘೋಷಣೆ ಮಾಡಲಾಗುವುದು. ಲಕ್ನೋದ ಕೇಂದ್ರ ಕಚೇರಿಯಿಂದ ನಿರ್ದೇಶನಗಳನ್ನು ಸ್ವೀಕರಿಸಿದ್ದೇವೆ. ಅಯೋಧ್ಯೆಗೆ ಒಂದು ಅಥವಾ ಎರಡು ಬಸ್ಗಳ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಆ ಬಳಿಕ ಬೇಡಿಕೆ ಹೆಚ್ಚಾದರೆ ಹೆಚ್ಚಿನ ಬಸ್ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅಧಿಕಾರಿ ವಿವರಿಸಿದರು.
ಎಲೆಕ್ಟ್ರಿಕ್ ಬಸ್ಗಳ ಪ್ರಾರಂಭಕ್ಕೂ ಚಿಂತನೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಶೀಘ್ರದಲ್ಲೇ ಅಯೋಧ್ಯೆಗೆ ಎಲೆಕ್ಟ್ರಿಕ್ ಬಸ್ಗಳನ್ನು ಕೂಡ ಪ್ರಾರಂಭಿಸಲು ಚಿಂತನೆ ನಡೆಸುತ್ತಿದೆ. ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗಾಗಿ ಉತ್ತರ ಪ್ರದೇಶ ಸರ್ಕಾರವು ರಾಮಪಥ ಮತ್ತು ಧರ್ಮ ಪಥದಲ್ಲಿ ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸಲು ಯೋಜಿಸುತ್ತಿದೆ.
100 ಎಲೆಕ್ಟ್ರಿಕ್ ಬಸ್ಗಳು (Electric Bus) ಜನವರಿ 15 ರಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಲಿವೆ. ಧರ್ಮಪಥ ಮತ್ತು ರಾಮಪಥದಲ್ಲಿ ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆಯನ್ನು ಆರಂಭಿಸಲಾಗುತ್ತದೆ. ಹೆಚ್ಚುವರಿಯಾಗಿ ಜನವರಿ 15 ರಿಂದ 100 ಎಲೆಕ್ಟ್ರಿಕ್ ಬಸ್ಗಳು ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತವೆ. ಗಾಲ್ಫ್ ಕಾರ್ಟ್ಗಳು ಮತ್ತು ಇ-ರಿಕ್ಷಾಗಳ ಅನುಕೂಲವನ್ನು ಸಹ ಪರಿಚಯಿಸಲಾಗುವುದು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಚೌದಾ ಕೋಸಿ ಮತ್ತು ಪಂಚಕೋಸಿ ಪರಿಕ್ರಮ ಮಾರ್ಗಗಳಲ್ಲಿ ಉದಯ ಚೌಕ್ನಲ್ಲಿ ಹೊಸ ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲಿ ಒಟ್ಟು 70 ಎಕರೆ (10 ಎಕರೆ, 35 ಎಕರೆ ಮತ್ತು 25 ಎಕರೆ) ವಿಸ್ತೀರ್ಣದಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.