ಬಾಗಲಕೋಟೆ:- ಜಿಲ್ಲೆಯ ಬೀಳಗಿ ತಾಲ್ಲೂಕಿನ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಅನಗವಾಡಿ ಗ್ರಾಮದ ಬಳಿ ಕಬ್ಬು ತುಂಬಿ ನಿಂತ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ ಹೊಡೆದು ನುಜ್ಜುಗುಜ್ಜಾದ ಘಟನೆ ಜರುಗಿದೆ.
ಅಪಘಾತದಲ್ಲಿ ಓರ್ವ ಮಹಿಳೆ,ಮೂವರು ಪುರುಷರು ಸೇರಿ ಒಟ್ಟು ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಅಪಘಾತದ ಸದ್ದು ಕೇಳಿ ಬಂದ ಸ್ಥಳೀಯರು, ಕೂಡಲೇ ಬೀಳಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಹಾಗೂ ಸ್ಥಳೀಯರು ಸೇರಿ ಶವ ಹೊರತೆಗೆಯಲು ಹರಸಾಹಸ ಪಡಬೇಕಾಯಿತು.
ಈ ಬಗ್ಗೆ ಮಾತಾಡಿದ ಪ್ರತ್ಯಕ್ಷದರ್ಶಿ ಬಸು ಛಬ್ಬಿ ಎಂಬಾತ ‘ನಾಲ್ಕು ಗಂಟೆಗೆ ಹೊಲಕ್ಕೆ ಹೋಗಿ ಬರುವಾಗ ಜೋರಾದ ಸದ್ದು ಕೇಳಿ ಬಂತು. ಹೋಗಿ ನೋಡಿದರೆ ಕಾರು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು ಎಂದಿದ್ದಾನೆ. ಮೃತರೆಲ್ಲರೂ ವಿಜಯಪುರ ತಾಲ್ಲೂಕಿನ ಹೊನಗಳ್ಳಿ ಗ್ರಾಮದವರಾಗಿದ್ದಾರೆ. ಚಾಲಕ ಮಲ್ಲು ಪೂಜಾರಿ(25), ಕಲ್ಲು ಕವಟಗಿ(35), ಕಾಮಾಕ್ಷಿ ಬಡಿಗೇರ(30), ತುಕಾರಾಮ ತಳೇವಾಡ(30) ಮೃತರಾಗಿದ್ದಾರೆ. ಇವರಲ್ಲಿ ಕಲ್ಲು ಕವಟಗಿ ಎಂಬಾತ ಗ್ರಾಮ ಪಂಚಾಯತಿ ಸದಸ್ಯರಾಗಿದ್ದಾರೆ.
ಎಲ್ಲರೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬನಶಂಕರಿ ದೇವಿ ಜಾತ್ರೆಗೆ ಎಂದು ಮನೆಯಿಂದ ಹೊರಟಿದ್ದರು. ನಂತರ ವಾಪಾಸ್ ವಿಜಯಪುರ ಕಡೆ ಹೊರಡುವಾಗ ಈ ದುರ್ಘಟನೆ ನಡೆದಿದೆ.