ಬೆಂಗಳೂರು: ಗರ್ಭಿಣಿಯೊಬ್ಬರು ತನ್ನ 5 ವರ್ಷದ ಪುಟ್ಟ ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದು, ಇದೀಗ ಆಕೆಗಾಗಿ ಪತಿ ಹುಡುಕಾಡುತ್ತಿರುವ ಪ್ರರಣವೊಂದು ಬೆಳಕಿಗೆ ಬಂದಿದೆ. ಶಾಲಿನಿ ನಾಪತ್ತೆಯಾಗಿರುವ 4 ತಿಂಗಳ ಗರ್ಭಿಣಿ. ಶಾಲಿನಿ ಹಾಗೂ ಸ್ವಾಮಿ ದಂಪತಿ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮತ್ ಲೇ ಔಟ್ ನಲ್ಲಿ ವಾಸವಾಗಿದ್ದಾರೆ. ಸದ್ಯ ಈಕೆಗಾಗಿ ಪತಿ ಮೆಜೆಸ್ಟಿಕ್ ಹಾಗೂ ಬಿಎಂಟಿಸಿ ಬಸ್ ಸ್ಟಾಂಡ್ನಲ್ಲಿ ಕಣ್ಣೀರಾಕುತ್ತಾ ಹುಡುಕಾಡುತ್ತಿದ್ದಾರೆ.
ಶಾಲಿನಿ ಎಂದಿನಂತೆ ಬೆಳಗ್ಗೆ 6 ಗಂಟೆಗೆ ಹಾಲು ತರಲು 30 ರೂ. ಹಣ ತೆಗೆದುಕೊಂಡು ಹೋಗಿದ್ದರು. ಆದರೆ 8 ಗಂಟೆಯಾದ್ರೂ ಕೂಡ ಪತ್ನಿ ಶಾಲಿನಿ ಮನೆಗೆ ಬಾರದೇ ಇದ್ದಾಗ ಪತಿ ಗಾಬರಿಯಾದರು. ಬಳಿಕ ಯಾಕೆ ಪತ್ನಿ ಇನ್ನೂ ಮನೆಗೆ ಬಂದಿಲ್ಲ ಎಂದು ಹುಡುಕಾಟ ನಡೆಸಲು ಆರಂಭಿಸಿದರು. ಈ ವೇಳೆ ಪತ್ನಿ ಬಿಎಂಟಿಸಿ ಬಸ್ ಹತ್ತಿ ತೆರಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಳಗ್ಗೆಯಿಂದ ಮಧ್ಯರಾತ್ರಿಯಾದ್ರೂ ಪತಿ ಹುಡುಕಾಟ ನಡೆಸಿದ್ದಾರೆ. ಕೆಆರ್ ಮಾರ್ಕೆಟ್, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕುಟುಂಬಸ್ಥರು ಕೂಡ ಹುಡುಕಾಡಿದ್ದಾರೆ. ಅಲ್ಲದೆ ಬಸ್ ಸ್ಟಾಂಡ್ ನಲ್ಲಿ ಮಲಗಿರುವವರ ಬಳಿಯೂ ಹೋಗಿ ವಿಚಾರಿಸಿದ್ದಾರೆ. ಆದರೆ ಆಕೆ ಎಲ್ಲಿಯೂ ಕಾಣಿಸುತ್ತಿಲ್ಲ. ಹೀಗಾಗಿ 5 ವರ್ಷದ ಮಗನನ್ನ ಬಿಟ್ಟು ಶಾಲಿನಿ ತೆರಳಿರುವುದಾದ್ರೂ ಎಲ್ಲಿಗೆ ಎನ್ನುವ ಪ್ರಶ್ನೆ ಎದ್ದಿದೆ. ಪತ್ನಿಯ ನಾಪತ್ತೆ ಸಂಬಂಧ ಪತಿ ಸ್ವಾಮಿ ತಾವರೆಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.