ಕೊಯಮತ್ತೂರು:- ಪರೋಟ ತಿಂದ ಮರುದಿನವೇ ಯುವಕ ದುರ್ಮರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ವರದಿಯಲ್ಲಿ ಭಯಾನಕ ಸಂಗತಿ ಬಹಿರಂಗವಾಗಿದೆ.
ಹೇಮಚಂದ್ರನ್ ಮೃತ ಯುವಕ. ಬುಧವಾರ ರಾತ್ರಿ ಹೇಮಚಂದ್ರನ್ ಮತ್ತು ಆತನ ಸ್ನೇಹಿತರು ಊಟಕ್ಕೆಂದು ಪರೋಟ ತಂದು ಸೇವಿಸಿದ್ದರು. ಗುರುವಾರ ಬೆಳಗ್ಗೆ ಹೇಮಚಂದ್ರನ್ ಎಚ್ಚರಗೊಂಡಾಗ ಉಸಿರಾಡಲು ತೊಂದರೆಯಾಗುತ್ತಿದೆ ಅಂತಾ ಹೇಳಿದ್ದಾನೆ. ಇದಾದ ಕೆಲವೇ ಸಮಯದಲ್ಲಿ ಆತ ಕುಸಿದುಬಿದ್ದಿದ್ದಾರೆ. ತಕ್ಷಣ ಆತನನ್ನು ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಪ್ರಕರಣ ದಾಖಲಿಸಿಕೊಂಡ ಸುಲೂರು ಪೊಲೀಸರು ಹೇಮಚಂದ್ರನ್ ದೇಹವನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆ (ಸಿಎಂಸಿಎಚ್)ಗೆ ಮರಣೋತ್ತರ ಪರೀಕ್ಷೆಗೆಂದು ರವಾನಿಸಿದ್ದಾರೆ. ಆರು ತಿಂಗಳ ಹಿಂದೆಯೂ ರಾತ್ರಿ ಪರೋಟ ತಿಂದಾಗ ಹೇಮಚಂದ್ರನ್ ಉಸಿರಾಟದ ತೊಂದರೆ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಹೇಮಚಂದ್ರನ್ ಅವರ ಪಾಲಕರು ಮೃತದೇಹದ ಹೆಬ್ಬೆರಳಿನಲ್ಲಿ ಗಾಯದ ಗುರುತನ್ನು ಕಂಡು ಅನುಮಾನ ವ್ಯಕ್ತಪಡಿಸಿದರು. ಆದರೆ, ಆ ಗಾಯ ಸ್ನೇಹಿತರು ಬೈಕ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಸಂಭವಿಸಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 174 ಸಿಆರ್ಪಿಸಿ (ಸ್ವಾಭಾವಿಕ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಮಾಹಿತಿ ನೀಡಿದ್ದು, ಮರಣೋತ್ತರ ವರದಿ ನಡೆಸಿದ ಸಿಎಂಸಿಎಚ್ ವೈದ್ಯರೊಬ್ಬರ ಪ್ರಕಾರ, ಪರೋಟ ಸೇವನೆ ಸಾವಿಗೆ ಕಾರಣವಾಗಿದೆ ಎಂದಿದ್ದಾರೆ. ಶ್ವಾಸಕೋಸದ ಒಳಗೆ ಮೈದಾ ಅಂಶಗಳು ಪತ್ತೆಯಾಗಿದ್ದು, ಇದರಿಂದ ಉಸಿರಾಟದ ತೊಂದರೆ ಉಂಟಾಗಿ ಜೀವ ಹೋಗಿದೆ ಎಂದಿದ್ದಾರೆ. ಮರಣೋತ್ತರ ವರದಿಗೆ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದು, ಇನ್ನೂ ಮೂರ್ನಾಲ್ಕು ದಿನಗಳಲ್ಲಿ ವರದಿ ಸಿಗಬಹುದು, ಆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯುತ್ತದೆ ಎಂದಿದ್ದಾರೆ.
ನಗರದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಒಬ್ಬರು ಹೇಮಚಂದ್ರನ್ ಸಾವಿಗೆ ಸಂಭವನೀಯ ಕಾರಣಗಳನ್ನು ವಿವರಿಸಿದ್ದಾರೆ. ಅನ್ನನಾಳದ ಮೂಲಕ ಹೊಟ್ಟೆಯೊಳಗೆ ಹಾದುಹೋಗುವ ಆಹಾರ ಕಣಗಳು ಶ್ವಾಸನಾಳಕ್ಕೆ ಮರಳುವ ಸಾಧ್ಯತೆ ಕಡಿಮೆ. ಬಹಳ ಅಪರೂಪವಾಗಿ, ಆಹಾರ ಸೇವನೆಯ ಸಮಯದಲ್ಲಿ ಬಿಕ್ಕಳಿಕೆಗಳಂತಹ ಅಡಚಣೆ ಉಂಟಾದರೆ ಆಹಾರವು ಉಸಿರಾಟದ ಪ್ರದೇಶವನ್ನು ಪ್ರವೇಶಿಸಬಹುದು. ಇದು ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಕೆಲವು ಆಹಾರ ಪದಾರ್ಥಗಳಿಂದ ಅಲರ್ಜಿ ಉಂಟಾಗಬಹುದು, ಆದರೆ ಇದು ಸಾವಿಗೆ ಕಾರಣವಾಗಬಹುದೇ ಎಂಬುದು ತಿಳಿದಿಲ್ಲ. ಸಾವಿಗೆ ಇತರೇ ಕಾರಣಗಳು ಸಹ ಇರಬಹುದು ಎಂದರು.