ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಪಘಾತ ಹಾಗೂ ಅಪರಾಧ ರಹಿತ ಚಾಲನೆಗೆ ಮುಖ್ಯಮಂತ್ರಿಗಳ ಸ್ವರ್ಣ ಪದಕ ಪಡೆದ ಹಾಗೂ ಸುರಕ್ಷಾ ಚಾಲಕ ಬೆಳ್ಳಿ ಪದಕ ಪಡೆದ ಚಾಲನಾ ಸಿಬ್ಬಂದಿಗಳ ಕೆಲಸದ ಸ್ಥಳಗಳಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹಾಗೂ ದೈನಂದಿನ ಕರ್ತವ್ಯದಲ್ಲಿ ಕಾರ್ಯನಿರತರಾಗಿದ್ದಾಗ ಅವರನ್ನು ಗೌರವದಿಂದ ಕಾಣಲು ಸಂಸ್ಥೆಯ ವತಿಯಿಂದ ಚಾಲನಾ ಸಿಬ್ಬಂಧಿಗಳಿಗೆ “ಮುಖ್ಯಮಂತ್ರಿಗಳ ಸ್ವರ್ಣ ಪದಕ ಪಡೆದ ಚಾಲಕ” ಬ್ಯಾಡ್ಜ್ ಹಾಗೂ ಬೆಳ್ಳಿ ಪದಕ ಪಡೆದ “ಸುರಕ್ಷಾ ಚಾಲಕ” ಬ್ಯಾಡ್ಜ್ ನ್ನು ನೀಡುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಮುಂಬರುವ ದಿನಗಳಲ್ಲಿ ಸಂಸ್ಥೆಯ ಎಲ್ಲ ವಿಭಾಗಗಳಿಗೂ ಇದನ್ನು ವಿಸ್ತರಿಸಲಾಗುವುದು.
ಇದರ ಪ್ರಯುಕ್ತ ಸಾಂಕೇತಿಕವಾಗಿ, ದಿನಾಂಕ: 18-03-2025 ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಚಾಲಕರಾದಂತಹ ರಾಜೇಸಾಬ್ ತಹಸೀಲ್ದಾರ ರವರಿಗೆ “ಮುಖ್ಯಮಂತ್ರಿಗಳ ಸ್ವರ್ಣ ಪದಕ ಚಾಲಕ” ಬ್ಯಾಡ್ಜ್ ಹಾಗೂ ಸುರಕ್ಷಾ ಚಾಲಕ ಬೆಳ್ಳಿ ಪದಕ ಪಡೆದಂತಹ ಚಾಲಕರಾದ ಪಂಚಾಕ್ಷರಯ್ಯ ಎಸ್. ಹರಗೀಮಠ ಮತ್ತು ಮಂಜುನಾಥ ಬಿ. ಕುರಟ್ಟಿ ರವರಿಗೆ ಬೆಳ್ಳಿ ಪದಕ “ಸುರಕ್ಷಾ ಚಾಲಕ” ಬ್ಯಾಡ್ಜ್ ಅನ್ನು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ.ಎಂ ಅವರು ನೀಡಿ ಗೌರವಿಸಿದರು.
ದಿನನಿತ್ಯದ ಕರ್ತವ್ಯದ ವೇಳೆ ಇದನ್ನು ಧರಿಸಿ ಕರ್ತವ್ಯ ನಿರ್ವಹಿಸಲು ಸೂಚಿಸಿ, ಇತರ ಚಾಲನಾ ಸಿಬ್ಬಂದಿಗಳಿಗೆ ಮಾದರಿಯಾಗಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಟಿ. ಎಲ್. ಶ್ರೀನಾಥ್ ಹಾಗೂ ಕೇಂದ್ರ ಕಛೇರಿಯ ಇನ್ನಿತರ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.