ಮಂಡ್ಯ: ಮಳವಳ್ಳಿಯ ವಸತಿ ಶಾಲೆಯಲ್ಲಿ ಫುಡ್ ಪಾಯ್ಸ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಹೋಳಿ ಹಬ್ಬದ ಆಯೋಜಕರು, ಆಹಾರ ತಯಾರಕರು, ಶಾಲೆಯ ಮುಖ್ಯಸ್ಥರು ಸೇರಿದಂತೆ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪಟ್ಟಣದ ಮದನ್ ಚೌಟ್ರಿಯಲ್ಲಿ ಹೋಳಿ ಆಚರಣೆ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಹೋಟೆಲ್ನಿಂದ ರೈಸ್ ಬಾತ್ ಸರಬರಾಜು ಮಾಡಿತ್ತು. ಬಳಿಕ ಉಳಿದಿದ್ದ ಊಟವನ್ನು ವಸತಿ ಶಾಲೆಗೆ ನೀಡಲಾಗಿತ್ತು. ಈ ಊಟವನ್ನು ಸೇವಿಸಿದ್ದ 30 ವಿದ್ಯಾರ್ಥಿಗಳು ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ. ಇದರಲ್ಲಿ ಓರ್ವ ವಿದ್ಯಾರ್ಥಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಉಳಿದ ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿತ್ತು.
ಕಲುಷಿತ ಆಹಾರ ಸೇವನೆಯಿಂದ ಓರ್ವ ವಿದ್ಯಾರ್ಥಿ ಸಾವು ; 25ಕ್ಕೂ ಅಧಿಕ ಮಕ್ಕಳು ಅಸ್ವಸ್ಥ
ಇದೇ ಪ್ರಕರಣ ಸಂಬಂಧ ಸಚಿವರ ಸೂಚನೆಯಂತೆ ಹೋಳಿ ಆಯೋಜಕ ಪುಷ್ಪೇಂದ್ರ, ಹೋಟೆಲ್ ಮಾಲೀಕ ಸಿದ್ದರಾಜು, ಕಲ್ಯಾಣ ಮಂಟಪ ಸಿಬ್ಬಂದಿ ಕೃಷ್ಣ, ಗೋಕುಲ ವಿದ್ಯಾ ಸಂಸ್ಥೆ ಮುಖ್ಯಸ್ಥ ಲಂಕೇಶ್, ಕಾರ್ಯದರ್ಶಿ ಜಗದೀಶ್, ಕೆಲಸಗಾರ ಅಭಿಷೇಕ್ ಮೇಲೆ ಬಿಇಓ ಉಮಾ ನೀಡಿದ ಮೇರೆಗೆ ಎಫ್ಐಆರ್ ಹಾಕಲಾಗಿದೆ.