ಬೆಂಗಳೂರು: ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅವರ ಸವಿ ನೆನಪಿನಲ್ಲಿ ಅವರ ಜನ್ಮದಿನವನ್ನು ಇಂದು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಮಾಜಮುಖಿ ಕೆಲಸಗಳು, ಅನ್ನದಾನ ಹೀಗೆಯೇ ಹಲವಾರು ಕೆಲಸಗಳ ಮೂಲಕ ಅವರು ಅಪ್ಪು ಜನ್ಮದಿನ ಆಚರಿಸಲು ಮುಂದಾಗಿದ್ದಾರೆ.
ಇಂದು ನಟ ಡಾ.ಪುನೀತ್ ರಾಜಕುಮಾರ್ ಗೆ 50 ವರ್ಷದ ಹುಟ್ಟುಹಬ್ಬ ಇದ್ದು, ಬೆಳಗ್ಗೆ 8 ಗಂಟೆಯ ನಂತರ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಪತ್ನಿ ಅಶ್ವಿನಿ ಪುನೀತ್ ಮತ್ತು ಕುಟುಂಬಸ್ಥರಿಂದ ಪೂಜೆ ಸಲ್ಲಿಕೆ ಮಾಡಲಾಗುತ್ತದೆ.
ಅಪ್ಪು ಹೆಸರಿನಲ್ಲಿ ಪುಣ್ಯಭೂಮಿಯಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಅನ್ನದಾನ, ರಕ್ತದಾನ ಹೀಗೇ ಹಲವಾರು ಕಾರ್ಯಕ್ರಮವನ್ನು ಅಪ್ಪು ಫ್ಯಾನ್ಸ್ ಹಮ್ಮಿಕೊಂಡಿದ್ದಾರೆ.
ಇನ್ನೂ ಅಪ್ಪು ಹುಟ್ಟುಹಬ್ಬದ ಹಿನ್ನಲೆ ಪುಣ್ಯಭೂಮಿಗೆ ನೂರಾರು ಫ್ಯಾನ್ಸ್ ಬರುತ್ತಿದ್ದಾರೆ. ಇನ್ನೂ ಅಪ್ಪು ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೆಸರಿನಲ್ಲಿಯೇ ಅನ್ನದಾನ, ಸೇವಾ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ. ಈ ಮೂಲಕ ಫ್ಯಾನ್ಸ್ ಅಪ್ಪು ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಎಲ್ಲರನ್ನೂ ಅಗಲಿ ವರ್ಷಗಳೇ ಆದರೂ ಅವರ ನೆನಪು ಮಾತ್ರ ದಿನ ದಿನವೂ ಹಸಿಯಾಗುತ್ತಲೇ ಇದೆ. ಎಲ್ಲರಿಂದಲೂ ಅಷ್ಟು ಪ್ರೀತಿಗಳಿಸಿದ್ದ ಪುನೀತ್ ಅವರನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.ಪುನೀತ್ ಅಭಿನಯದ ಸಿನಿಮಾಗಳಲ್ಲಿ ಬೆಟ್ಟದ ಹೂವು ಸಿನಿಮಾ ಅತ್ಯದ್ಭುತ ಸಿನಿಮಾ ಇಂದಿಗೂ ಹಲವರಿಗೆ ಪುನೀತ್ ಎಂದಾಗ ನೆನಪಾಗುವುದು ಪುಟ್ಟ ಹುಡುಗನ ಮುಖ. ಅರಸು, ಅಭಿ, ಮಿಲನ, ಪರಮಾತ್ಮ ಈ ಸಿನಿಮಾಗಳ ಹೆಸರು ಕೇಳಿದಾಗ ನೆನಪಾಗುವುದು ಪುನೀತ್ ಅವರ ನಗುಮುಖ.
ನಟ ಪುನೀತ್ ರಾಜ್ಕುಮಾರ್, ಬದುಕಿದ್ದಾಗಲೇ ಸಾಕಷ್ಟು ಒಳ್ಳೊಳ್ಳೆಯ ಕೆಲಸ ಮಾಡಿ ಹೋದವರು. ಯಾರಿಗೂ ಕಾಣದಂತೆ, ತೆರೆಹಿಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು. ಅವರ ಪತ್ನಿ, ದೊಡ್ಮನೆ ಸೊಸೆ ಅಶ್ವಿನಿ ಕೂಡ ಅದನ್ನೇ ಮುಂದುವರೆಸಿಕೊಂಡು ಹೊಗುತ್ತಿದ್ದಾರೆ. ಪುನೀತ್ ಅವರ ಹೆಸರು ಎಂದೆಂದಿಗೂ ಅಜರಾಮರವಾಗಿ ಉಳಿಯುತ್ತದೆ.