ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ವಿರೋಧ ಪಕ್ಷಗಳ ಆರೋಪದ ಬೆನ್ನಲ್ಲೇ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ( ಈ ಹಿಂದೆ ಮೈಸೂರು ಮಿನರಲ್ಸ್ ಸಂಸ್ಥೆ) ರಾಜ್ಯ ಸರ್ಕಾರಕ್ಕೆ 1402 ಕೋಟಿ ರೂ.ಗಳ ಬಂಪರ್ ಗಿಫ್ಟ್ ನೀಡಿದೆ.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಅಧ್ಯಕ್ಷ ಜಿ.ಎಸ್ ಪಾಟೀಲ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2023-24ನೇ ಸಾಲಿನಲ್ಲಿ ಬಂದ ಲಾಭದಲ್ಲಿ 1403.58 ರೂ.ಗಳ ಚೆಕ್ ಹಸ್ತಾಂತರ ಮಾಡಲಾಗಿದೆ.
ರಾಜ್ಯದಲ್ಲಿ ಗಣಿಗಾರಿಕೆಯಲ್ಲಿ ತೊಡಗಿರುವ ಕರ್ನಾಟಕ ಸರ್ಕಾರದ ಸಂಪೂರ್ಣ ಮಾಲೀಕತ್ವದ ಸಂಸ್ಥೆಯಾದ ಮಿನರಲ್ಸ್ ಕಾರ್ಪೋರೇಷನ್, 2023-24ನೇ ಸಾಲಿನಲ್ಲಿ 1403.58 ಕೋಟಿ ರೂ.ಗಳ ವಹಿವಾಟು ನಡೆಸಿ 867.33 ಕೋಟಿ ತೆರಿಗೆ ಪೂರ್ವ ಲಾಭ ಹಾಗೂ 643.20 ಕೋಟಿ ರೂ. ತೆರಿಗೆ ನಂತರದ ಲಾಭ ಗಳಿಸಿದೆ.
354ನೇ ಮಂಡಳಿ ಸಭೆಯಲ್ಲಿ ಕಂಪನಿಯು 2023-24ನೇ ಸಾಲಿನಲ್ಲಿ ಗಳಿಸಿರುವ ನಿವ್ವಳ ಲಾಭದ ಮೇಲೆ ಷೇರುದಾರರಿಗೆ ಅಂದರೆ ಸರ್ಕಾರಕ್ಕೆ ರೂ.191.43 ಕೋಟಿಗಳನ್ನು ಶೇ.30% ಲಾಭಾಂಶವಾಗಿ ನೀಡಲು ಮಂಡಳಿ ನಿರ್ದೇಶಕರು ಒಪ್ಪಿಗೆ ನೀಡಿದ್ದಾರೆ.
ಪ್ರತಿ ವರ್ಷ ಈ ನಿಗಮದಿಂದ ರೂ.15.00 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಆಯವ್ಯಯದಲ್ಲಿ ನಿಗದಿಪಡಿಸಲಾಗುತ್ತಿದ್ದು, 2023-24ನೇ ಸಾಲಿಗೆ ರೂ.15ಕೋಟಿಗಳನ್ನು ನಿಗದಿಪಡಿಸಿದ್ದು, 15 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.
ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮಂಡಳಿ ಅಧ್ಯಕ್ಷ ಜಿ.ಎಸ್.ಪಾಟೀಲ್, ಕೆಎಸ್.ಎಂಸಿಎಲ್ ನಿಗಮದ ಅಧಿಕಾರಿಗಳು ಹಾಜರಿದ್ದರು.