ಕರುನಾಡ ರಾಜರತ್ನ, ಅಭಿಮಾನಿಗಳ ಪಾಲಿನ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚೊಚ್ಚಲ ಸಿನಿಮಾ ಅಪ್ಪು ಇಂದು ರೀ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 23 ವರ್ಷದ ನಂತ್ರ ಮತ್ತೊಮ್ಮೆ ಮರುಬಿಡುಗಡೆಯಾಗಿರುವ ಅಪ್ಪುವನ್ನು ಪ್ರೇಕ್ಷಕ ಅಪ್ಪಿಕೊಂಡಿದ್ದಾನೆ. ಅಪ್ಪು ಚಿತ್ರದ ರೀ ರಿಲೀಸ್ ಸಾಕ್ಷಿಯಾದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ವೇಳೆ ದೊಡ್ಮನೆ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ
ಕನ್ನಡ ಚಿತ್ರರಂಗದಲ್ಲಿ ಅಜಾತಶತ್ರುವಿನಂತಿದ್ದವರು ಪುನೀತ್. ಅಪ್ಪು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಅಪ್ಪು ಇಷ್ಟಪಡುತ್ತಿದ್ದ ನಿರ್ದೇಶಕರಲ್ಲಿ ಒಬ್ರು ಸಂತೋಷ್ ಆನಂದ್ ರಾಮ್. ಈ ಜೋಡಿಯ ಸಂಗಮದ ರಾಜಕುಮಾರ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. ಆ ಬಳಿಕ ಈ ಜೋಡಿ ಯುವರತ್ನ ಸಿನಿಮಾ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅಪ್ಪು-ಸಂತೋಷ್ ಕಾಂಬೋದಲ್ಲಿ ಮತ್ತಷ್ಟು ಚಿತ್ರಗಳು ಪ್ರೇಕ್ಷಕರ ಎದುರು ಬರುತ್ತಿದ್ದವು. ಆದರೆ ಇಂದು ಬೆಟ್ಟದ ಹೂವು ಪರಮಾತ್ಮನ ಮುಡಿ ಸೇರಿದೆ. ಹೀಗಾಗಿ ಅಪ್ಪುವನ್ನು ಸದಾ ಜೀವಂತವಾಗಿಡಲು ಅವರ ಜೀವನಗಾಥೆಯನ್ನ ಚಿತ್ರ ಮಾಡುವ ಪ್ಲಾನ್ ಸಂತೋಷ್ ಆನಂದ್ ರಾಮ್ ಅವರದ್ದು. ಈ ಬಗ್ಗೆ ಖಾಸಗಿ ಸುದ್ದಿಯೊಂದಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ.
‘ಇಂದು ಎಐ ಟೆಕ್ನಾಲಜಿ ಇದೆ. ಮುಂದಿನ ದಿನಗಳಲ್ಲಿ ಆ ದೇವರು ಅವಕಾಶ ಕೊಟ್ಟರೆ, ಅಪ್ಪು ಅವರ ಚರಿತ್ರೆಯನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ನಾನು ಮಾಡಬೇಕು ಎಂಬುದನ್ನು ಈಗ ತುಂಬ ಗಂಭೀರವಾಗಿ ಪರಿಗಣಿಸಿದ್ದೇನೆ. ಹೊಂಬಾಳೆ ಫಿಲ್ಮ್ಸ್ ಮೂಲಕ ನಾನು ಮತ್ತು ಪುನೀತ್ ಅವರು 5 ಸಿನಿಮಾ ಮಾಡಬೇಕು ಅಂತ ಪ್ಲ್ಯಾನ್ ಆಗಿತ್ತು. ಮಾಡಿದ್ದರೆ ರೆಕಾರ್ಡ್ ಆಗುತ್ತಿತ್ತು. ಮೂರು ಮತ್ತು ನಾಲ್ಕನೇ ಸಿನಿಮಾಗೆ ಕಮಿಟ್ ಕೂಡ ಆಗಿದ್ದೆವು. ಆದರೆ ದೇವರ ಆಟ ಬೇರೆಯೇ ಇತ್ತು’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಅಪ್ಪು ಕುರಿತು ಪುಸ್ತಕ ಕೂಡ ಸಿದ್ಧವಾಗುತ್ತಿದೆ. ಅವರ ಹುಟ್ಟುಹಬ್ಬಕ್ಕೆ ಬುಕ್ ಬರಲಿದೆ. ಪ್ರಕೃತಿ ಬನವಾಸಿ ಅವರು ಬರೆಯುತ್ತಿದ್ದಾರೆ. ಅಶ್ವಿನಿ ಮೇಡಂ ನಿಂತು ಆ ಕೆಲಸ ಮಾಡಿಸುತ್ತಿದ್ದಾರೆ. ಆ ಪುಸ್ತಕದಿಂದ ಪುನೀತ್ ಅವರ ವ್ಯಕ್ತಿತ್ವದ ಬಗ್ಗೆ ಜನರಿಗೆ ಇನ್ನಷ್ಟು ಗೊತ್ತಾಗುತ್ತದೆ. ನಾವು ಎಷ್ಟು ಸಾಧ್ಯವೋ ಅಷ್ಟು ಅವರನ್ನು ನೆನಪಿಸಿಕೊಳ್ಳುತ್ತಾ ಇರುತ್ತೇವೆ ಎಂದು ಸಂತೋಷ್ ಆನಂದ್ರಾಮ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.