‘ದೂರದರ್ಶನ’ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಈಗ ಪೀಟರ್ ಹಿಂದೆ ಬಿದ್ದಿದ್ದಾರೆ. ಸುಕೇಶ್ ಎರಡನೇ ಪ್ರಯತ್ನ ಪೀಟರ್ ಚಿತ್ರ ಈಗಾಗಲೇ ಸಾಕಷ್ಟು ವಿಚಾರಗಳಿಂದ ಸುದ್ದಿಯಲ್ಲಿದೆ. ಇದೀಗ ಚಿತ್ರತಂಡ ಮಲಯಾಳಂ ನ ಖ್ಯಾತ ಗಾಯಕ ಪ್ರಣವಂ ಸಸಿ ಅವರನ್ನು ಪೀಟರ್ ಗಾಗಿ ಕನ್ನಡಕ್ಕೆ ಕರೆತಂದಿದ್ದಾರೆ.
ಮಾಲಯಾಳಂ ಹಿಟ್ ಸಿನಿಮಾ ಆವೇಶಂ ಹಾಡಿಗೆ ಧ್ವನಿಯಾಗಿದ್ದ, ಕನ್ನಡದ ಪ್ರೇಮ್ ನಿರ್ದೇಶನದ ಕೆ ಡಿ ಸಿನಿಮಾದ “ಶಿವ ಶಿವ” ಮಲಯಾಳಂ ವರ್ಷನ್ ಹಾಡು ಹಾಗೂ ಪುಷ್ಪ-೨ ಸಿನಿಮಾದ “ಪೀಲಿಂಗ್” ಸಾಂಗ್ ಗೆ ಕಂಠ ನೀಡಿ ಎಲ್ಲರನ್ನ ಕುಣಿಸಿದ್ದ ಪ್ರಣವಂ ಸಸಿ, ಪೀಟರ್ ಸಿನಿಮಾದ ವಿಶೇಷ ಹಾಡಿಗೆ ಧ್ವನಿಯಾಗಿದ್ದಾರೆ. ಈ ಮೂಲಕ ಪ್ರಣವಂ ಸಸಿ ಸ್ಯಾಂಡ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ರುತ್ವಿಕ್ ಮುರುಳಿಧರ್ ಸಂಗೀತ ನಿರ್ದೇಶನದ ಹಾಗೂ ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯ ಬರೆದಿರುವ ಮಜವಾದ ಗೀತೆಗೆ ಪ್ರಣವಂ ಧ್ವನಿಯಾಗಿದ್ದಾರೆ.
ಪೀಟರ್ ಚಿತ್ರದಲ್ಲಿ ರಾಜೇಶ್ ಧ್ರುವ, ರವೀಕ್ಷಾ ಶೆಟ್ಟಿ, ಜಾಹ್ನವಿ ರಾಯಲ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ತಾರಾಬಳಗದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಡಿಸೈನರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ‘ಪೀಟರ್’ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಮಡಿಕೇರಿ ,ಭಾಗಮಂಡಲ ಸುತ್ತ ಹಚ್ಚ ಹಸುರಿನ ವಾತಾವರಣದಲ್ಲಿ ನಡೆಯೋ ಸೆನ್ಸಿಟಿವ್ ಕಥೆ ಯನ್ನು ಚಿತ್ರ ಪ್ರೇಮಿಗಳಿಗೆ ನಿರ್ದೇಶಕ ಸುಕೇಶ್ ಶೆಟ್ಟಿ ಸೊಗಸಾಗಿ ಕಟ್ಟಿಕೊಡುವ ಪ್ರಯತ್ನದಲ್ಲಿದ್ದಾರೆ.