ಅಮರಾವತಿ : ತಿರುಪತಿ ತಿಮ್ಮಪ್ಪನ ಸನ್ನಧಿಗೆ ಕರ್ನಾಟಕದ ಹೆಮ್ಮೆ ಕೆಎಂಎಫ್ ತುಪ್ಪ ಕಳುಹಿಸುತ್ತಿರುವುದೇ ಗೊತ್ತಿರೋ ವಿಚಾರ. ಆದರೆ ಇದೀಗ ಇದೇ ಟಿಟಿಡಿಗೆ ದಾಖಲೆಯ ಪ್ರಮಾಣದಲ್ಲಿ ಕೆಎಂಎಫ್ ನಂದಿನಿ ತುಪ್ಪ ರವಾನೆಯಾಗುತ್ತಿದೆ.
ಹೌದು, ಇತ್ತೀಚಿಗೆ ತಿರುಪತಿಯಲ್ಲಿ ಬೇರೆ ಬ್ರಾಂಡ್ನ ತುಪ್ಪ ಬಳಸಿ ಲಡ್ಡು ತಯಾರಿಸಲಾಗುತ್ತಿತ್ತು. ಅದರಲ್ಲಿ ದನದ ಕೊಬ್ಬಿರುವುದು ಸಹ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದಾದ ಬಳಿಕ ತಿರುಪತಿಯಲ್ಲ ಲಡ್ಡು ತಯಾರಿಕೆಗಾಗಿ ಕೇವಲ ಕೆಎಂಎಫ್ ನಂದಿನಿ ತುಪ್ಪವನ್ನು ಮಾತ್ರ ಬಳಸುಲಾಗುತ್ತಿದೆ. ಹೀಗಾಗಿ ಇದೀಗ ಕೆಎಂಎಫ್ ತುಪ್ಪಕ್ಕೆ ಭಾರಿ ಬೇಡಿಕೆ ಬಂದಿದ್ದು, ಸದ್ಯ ಯುಗಾದಿ ಸಮೀಪಿಸುತ್ತಿದ್ದು, ಈ ಹಿನ್ನೆಲೆ ಲಡ್ಡು ತಯಾರಿಕೆಗಾಗಿ ತುರ್ತು 2 ಸಾವಿರ ಟನ್ ತುಪ್ಪವನ್ನು ಕಳುಹಿಸಿಕೊಡುವಂತೆ ಟಿಟಿಡಿ ಕೆಎಂಎಫ್ಗೆ ಸೂಚಿಸಿದ್ದು, ಈ ತಿಂಗಳಲ್ಲಿ ಸಪ್ಲೈ ಮಾಡುವಂತೆ ತಿಳಿಸಿದೆ.
ಸತತವಾಗಿ ಕೆಎಂಎಫ್ ನಂದಿನಿಗೆ ಮಾತ್ರ ಟಿಟಿಡಿ ಟೆಂಡರ್ ಕೊಡುತ್ತಿದೆ. ಈ ಮೊದಲು ತಿಮ್ಮಪ್ಪನ ಸನ್ನಿಧಾನಕ್ಕೆ ಎರಡು ದಿನಕ್ಕೆ ಒಮ್ಮೆ ತುಪ್ಪ ರವಾನೆಯಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿ ದಿನವೂ ತುಪ್ಪ ರವಾನೆಯಾಗುತ್ತಿದೆ. ಈ ವರ್ಷ 5 ಸಾವಿರ ಟನ್ ತುಪ್ಪವನ್ನು ರವಾನಿಸುವಂತೆ ಟಿಟಿಡಿ ಕೆಎಂಎಫ್ಗೆ ಬೇಡಿಕೆ ಇಟ್ಟಿದ್ದು, ಈಗಾಗಲೇ 600 ಟನ್ ತುಪ್ಪ ಕಳುಹಿಸಿಕೊಡಲಾಗಿದೆ. ಬೇಸಿಗೆ ಕಾಲವಾಗಿರುವುದರಿಂದ ಹಾಲಿನ ಸಂಗ್ರಹದಲ್ಲಿಯೂ ಕುಸಿತ ಕಂಡಿದ್ದು, ಸಂಗ್ರಹವಿರುವ ಬೆಣ್ಣೆಯಲ್ಲಿ ಶೀಘ್ರ ತುಪ್ಪ ತಯಾರಿಕೆ ಮಾಡುವಂತೆ ಕೆಎಂಎಫ್ ಯೂನಿಯನ್ಗಳಿಗೆ ಸೂಚನೆ ನೀಡಿದೆ.