ಬೆಂಗಳೂರು: ಬೇಸಿಗೆಯ ಸಮಯ ರೈತರೆಲ್ಲ ತನ್ನ ಹೊಲಗದ್ದೆಗಳ ಕಾರ್ಯಗಳನ್ನು ಮುಗಿಸಿ ಮನೆಯಲ್ಲಿ ನಿರಾಳವಾಗಿ ಕಾಲ ಕಳೆಯುವ ಸಮಯ. ಗಿಡ-ಮರಗಳಲ್ಲಿ ಹಸಿರು ಸಿರಿ ಚಿಮ್ಮುವ ಸಂಭ್ರಮ. ಇಂಥ ಸಂಭ್ರಮದಲ್ಲಿ ಗಂಡಸರಿಗೆ ಬರುವ ಹಬ್ಬ ಹೋಳಿ. ಕಾಮವು ಕ್ಷಣಿಕ ಪ್ರೇಮವು ಶಾಶ್ವತ, ಕಾಮವು ದೈಹಿಕ, ಪ್ರೇಮವು ಮಾನಸಿಕ. ನಮ್ಮ ಅಂತರಂಗ ಬಹಿರಂಗ ಶುದ್ಧಿಯಿಂದ ಕಾಮವನ್ನು ನಿಗ್ರಹಿಸಿ ಪ್ರೇಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ ಬದುಕನ್ನು ಕಂಡುಕೊಳ್ಳುವ ಪರಿಯೇ ಕಾಮ ದಹನದ ಹೋಳಿ ಹಬ್ಬ.
ನಮ್ಮ ಹಬ್ಬಗಳಲ್ಲಿ ಪ್ರಕೃತಿಯನ್ನಾಧರಿಸಿ ಮಾಡುವ ಹಬ್ಬಗಳೇ ಹೆಚ್ಚು. ಅವುಗಳಲ್ಲಿ ಒಂದು ಹೋಲಿ ಅಥವಾ ವಸಂತೋತ್ಸವ. ಈ ಹೋಲಿಗಿಂತ ಮೊದಲು ಮಲೆನಾಡು ಮತ್ತು ಕರಾವಳಿಯ ಉತ್ತರ ಭಾಗದಲ್ಲಿ ಸುಗ್ಗಿಕುಣಿತ ಎಂಬುದಾಗಿ ಹಾಲಕ್ಕಿಸಮಾಜದವರು ನಡೆಸುತ್ತಾರೆ. ಇದೊಂದು ಜಾನಪದ ಸಂಪ್ರದಾಯ. ಸಾಮಾನ್ಯವಾಗಿ ಒಂದು ಸಲದ ಬೆಳೆ ಮುಗಿದು ಎರಡೆನೇಯ ಬೆಳೆಯ ಆರಂಭಕ್ಕೂ ಮುನ್ನ ಈ ಆಚರಣೆ ಮಾಡುತ್ತಾರೆ. ನಾನಾ ವಿಧವಾದ ಪಾರಂಪರಿಕ ವೇಷಗಳನ್ನು ಧರಿಸಿ ಮನೆ ಮನೆಗೂ ತಿರುಗುತ್ತಾ ಸಂತೋಷವೃದ್ಧಿಯನ್ನು ಮಾಡುತ್ತಾರೆ. ದುಡಿದು ದಣಿದ ರೈತನಿಗೆ ಇದು ಆನಂದವನ್ನು ನೀಡುತ್ತದೆ.
ಹೋಳಿ ಹಬ್ಬದ ಮಹತ್ವ
ಹಿಂದೂಗಳಲ್ಲಿ ಹೋಳಿ ಹಬ್ಬವು ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು ಹಾಗಾಗಿ ಹೋಳಿ ಹಬ್ಬವನ್ನು ಅಪಾರ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ಕೆಲವೆಡೆ ಸತತ ಎರಡು ದಿನಗಳ ವರೆಗೆ ಆಚರಿಸಲಾಗುತ್ತದೆ, ಚೋಟಿ ಹೋಳಿ ಮತ್ತು ಮತ್ತೊಂದು ದಿನ ಬಡಿ ಹೋಳಿ ಅಥವಾ ರಂಗ್ ವಾಲಿ ಹೋಳಿ ಎಂದೂ ಕರೆಯಲಾಗುತ್ತದೆ. ಚೋಟಿ ಹೋಳಿಯಂದು, ಜನರು ದೀಪವನ್ನು ಬೆಳಗಿಸುತ್ತಾರೆ, ನಂತರ ರಾತ್ರಿ ಹೋಲಿಯ ದಹನವನ್ನು ನಡೆಸಲಾಗುತ್ತದೆ. ಹೋಳಿ ಶುದ್ಧಾನುಶುದ್ಧ ಭಾರತೀಯ ಆಚರಣೆ. ಅದರಲ್ಲೂ ಉತ್ತರ ಭಾರತದಲ್ಲಿ ಭಾರೀ ಜನಪ್ರಿಯ. ಆ ಜನಪ್ರಿಯತೆಯ ಕಾರಣದಿಂದಲೇ ಈಗ ಇಡೀ ದೇಶವನ್ನು ಹಬ್ಬಿದ್ದಷ್ಟೇ ಅಲ್ಲದೆ ವಿದೇಶಗಳಲ್ಲೂ ವ್ಯಾಪಿಸಿಕೊಂಡಿದೆ.
ಇನ್ನು ಕೆಲವೆಡೆ ಜನರು ಬಣ್ಣಗಳು ಮತ್ತು ನೀರಿನಿಂದ ಪೂರ್ತಿ ದಿನ ಆಟವಾಡುತ್ತಾರೆ. ಜೊತೆಗೆ ಪರಸ್ಪರರ ಮನೆಗೆ ಭೇಟಿ ನೀಡುವ ಮೂಲಕ ಸಿಹಿ ಹಂಚುತ್ತಾರೆ. ಈ ಹಬ್ಬವನ್ನು ಕರ್ನಾಟಕದಾದ್ಯಂತ ಅಪಾರ ಸಂತೋಷದಿಂದ ಆಚರಿಸುತ್ತಾರೆ. ಆ ದಿನ ಹೊಸ ಬಟ್ಟೆ ಧರಿಸಿ, ಪ್ರೀತಿ ಪಾತ್ರರೊಂದಿಗೆ ಬಣ್ಣಗಳ ಓಕುಳಿಯಾಡಿ ಹಬ್ಬವನ್ನು ಆನಂದಿಸುತ್ತಾರೆ. ಇನ್ನು ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್ ಶಿವನಿಂದ ಹೋಳಿ ಹಬ್ಬವು ಬೆಳಕಿಗೆ ಬಂದಿತು ಎಂದು ಹೇಳಲಾಗುತ್ತದೆ. ಈ ಹಬ್ಬವು, ದುಷ್ಕ್ರತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸಾರವನ್ನು ತಿಳಿಸಿ ಕೊಡುತ್ತದೆ. ಜೊತೆಗೆ ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗಿ ಹೊಸತನ ಪ್ರಾರಂಭದ ಕಾಲವಾಗಿದೆ.
ಹಬ್ಬದ ಹೆಸರು ಬೇರೆ ಬೇರೆಯದರೂ ಆಚರಣೆ ಒಂದೇ!
ಉತ್ತರ ಪ್ರದೇಶದ ಮಥುರಾದಲ್ಲಿ ಹೋಳಿ ಅತ್ಯಂತ ಜನಪ್ರಿಯ. ಹೋಳಿ ಹಬ್ಬದೊಂದಿಗೆ ರಾಧಾ- ಕೃಷ್ಣರ ಒಲುಮೆಯ ಕಥೆ ಬೆಸೆದುಕೊಂಡಿದ್ದು ಎನ್ನುವುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಬ್ರಜ್ ಎಂಬ ಪ್ರದೇಶದಲ್ಲಿ ಬರೋಬ್ಬರಿ 16 ದಿನಗಳ ಕಾಲ ಹೋಳಿಯ ಆಚರಣೆ ನಿರಂತರವಾಗಿ ನಡೆಸಲಾಗುತ್ತದೆ. ಈ ಹಬ್ಬವನ್ನು ಸಿಖ್ಖರು ಮೂರು ದಿನಗಳ ಕಾಲ ಹೋಲಾ ಮೊಹಲ್ಲಾ ಎಂಬುದಾಗಿ ಆಚರಿಸುತ್ತಾರೆ. ಅಸ್ಸಾಮಿಗರಿಗೆ ಹೋಳಿ ಫಕುವಾ ಅಥವಾ ಫಗುವಾ ಇನ್ನು ಒಡಿಶಾ ಮಂದಿಗೆ ಡೋಲಾ ಜಾತ್ರಾ, ಬಂಗಾಳಿಯರಿಗೆ ಬಸಂತೋ ಉತ್ಸವ್ ಹೀಗೆ ಹೆಸರು ಬೇರೆ ಬೇರೆಯದರೂ ಆಚರಣೆ ಒಂದೇ. ಹಾಗಾಗಿ ಈ ಹಬ್ಬ ವಿಶ್ವ ಪ್ರಸಿದ್ಧ. ಈ ಬಾರಿಯೂ ಹೋಳಿಯನ್ನು ಒಟ್ಟು ಗೂಡಿ ಆಚರಿಸುವ ಜೊತೆಗೆ ರಾಸಾಯನಿಕವಲ್ಲದ ಬಣ್ಣಗಳನ್ನು ಬಳಸುವುದರತ್ತ ಗಮನ ಹರಿಸೋಣ.