ಬೆಂಗಳೂರು:- ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2025 ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೋತ್ತರ ಕಲಾಪದಲ್ಲಿ ಪರಿಷತ್ ಶಾಸಕ ಟಿಎ ಶರವಣ ಅವರು ಮಾತನಾಡಿ, ಗ್ರೇಟರ್ ಬೆಂಗಳೂರು ಎನ್ನುವ ಹೆಸರಿನಲ್ಲಿ ನಮ್ಮ ಬೆಂಗಳೂರನ್ನು ಹದಗೆಡಿಸಲಾಗುತ್ತಿದೆ. 5 ವರ್ಷ ಆಗಿದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗಿಲ್ಲ. ಅದನ್ನು ಮಾಡುವ ಬದಲು, 7 ಕಾರ್ಪೊರೇಷನ್ ಮಾಡುವ ಯೋಜನೆ ಮಾಡಿದ್ದಾರೆ. ಅದರಿಂದ ಉಪಯೋಗಕ್ಕಿಂತ ಅನಾನುಕೂಲವೇ ಜಾಸ್ತಿ. ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸಮನ್ವಯ ಇಲ್ಲ. ಹೀಗಿರುವಾಗ ವಿವಿಧ ಪಕ್ಷಗಳು ಅಧಿಕಾರಕ್ಕೆ ಬರುವ ಕಾರ್ಪೊರೇಷನ್ ಅನ್ನು ಹೇಗೆ ನಿಭಾಯಿಸುತ್ತೀರಾ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಟಿ.ಎ.ಶರವಣ ಅವರು, ಪ್ರಶ್ನಿಸಿದರು.
ಇನ್ನೂ ಬೆಂಗಳೂರಿನ ಆಡಳಿತ ವಿಸ್ತರಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಹಾಗೂ ಬಿಬಿಎಂಪಿಯನ್ನು ವಿಂಗಡಿಸಿ ಏಳು ನಗರ ಪಾಲಿಕೆಗಳನ್ನಾಗಿ ಮಾಡಲು ಉದ್ದೇಶಿಸಿರುವ “ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2025 ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಬೆಂಗಳೂರಿನ ಅಭಿವೃದ್ಧಿಯ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಮಸೂದೆ ತರಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದರೆ, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಬೆಂಗಳೂರನ್ನು ಹಾಳು ಮಾಡಲು ಇದನ್ನು ತರಲಾಗುತ್ತಿವೆ ಎಂದು ಆರೋಪ ಹೊರಿಸಿದ್ದಾರೆ.