ಚಿತ್ರದುರ್ಗ : ಮೊಳಕಾಲ್ಮೂರು ತಾಲೂಕಿನ ರಾಯಾಪುರ ಗ್ರಾಮದ ಅಲೆಮಾರಿ ಕಾಲೋನಿಗೆ ಮಾಜಿ ಸಚಿವ ಶ್ರೀರಾಮುಲು ಭೇಟಿ ನೀಡಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಎಂ. ಶ್ರೀನಿವಾಸ್ ಗೆ ಸನ್ಮಾನಿಸಿ ಅವರ ಆರೋಗ್ಯ ವಿಚಾರಿಸಿದರು. ನಂತರ ಸಮೀಪದಲ್ಲಿಯೇ ನಿರ್ಮಾಣ ಹಂತದಲ್ಲಿರುವ ಸರಕಾರಿ ಬಸ್ ಡಿಪೋಗೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು,ಮೊಳಕಾಲ್ಮುರು ಅತಿ ಹಿಂದುಳಿದ ಕ್ಷೇತ್ರವಾಗಿದೆ. ಇಲ್ಲಿನ ಜನರು, ವಿದ್ಯಾರ್ಥಿಗಳು ನಾನಾ ಸಮಸ್ಯೆ ಹಾಗೂ ಸೌಲಭ್ಯದಿಂದ ವಂಚಿತರಾಗಿದ್ದ ಕಾರಣ ನಾನು ಸಾರಿಗೆ ಸಚಿವನಾದ ಸಮಯದಲ್ಲಿ ತಾಲೂಕು ಕೇಂದ್ರ ಸ್ಥಾನದಲ್ಲಿ ಸರಕಾರಿ ಬಸ್ ನಿಲ್ದಾಣ, ರಾಯಾಪುರ ಸಮೀಪದಲ್ಲಿ ಸರಕಾರಿ ಬಸ್ ಡಿಪೋ ಮುಂಜೂರು ಮಾಡಿಸಿದ್ದೆ. ಇದರ ಜೊತೆಯಲ್ಲಿ ನಾನು ಆರೋಗ್ಯ ಸಚಿವನಾಗಿದ್ದಾಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರ ನೇಮಕ, ಸೌಲಭ್ಯಗಳನ್ನು ನೀಡಿದ್ದೆನು ಎಂದರು.
ಮಹಾರಾಷ್ಟ್ರ ಸರಕಾರ ರಚನೆಯಲ್ಲಿ ಆದ ಬದಲಾವಣೆಯಂತೆ ರಾಜ್ಯದಲ್ಲಿಯೂ ಮುಂದಿನ ದಿನದಲ್ಲಿ ರಾಜಕಾರಣ ನಡೆಯಲಿದೆ. ಸಿಎಂ.ಸಿದ್ದರಾಮಯ್ಯ ಮಂಡಿಸಿರುವ ಏಳು ಲಕ್ಷ ಕೋಟಿ ರೂ ಬಜೆಟ್ ರಾಜ್ಯವನ್ನು ಸಾಲಕ್ಕೆ ಸಿಲುಕಿಸಿ ಹೊರೆಯಾಗಿಸಿದೆ. ಗ್ಯಾರೆಂಟಿ ಯೋಜನೆಗಳನ್ನು ನಿರ್ವಹಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 25 ಸಾವಿರ ಕೋಟಿ ರೂ ಹಣವನ್ನು ಬಳಕೆ ಮಾಡಿಕೊಂಡು ಈ ಸಮುದಾಯಗಳನ್ನು ಕಡೆಗಾಣಿಸಿದೆ. ಶಕ್ತಿ ಯೋಜನೆಗೆ ಹಣ ನೀಡದೆ ಸಾರಿಗೆ ಸಿಬ್ಬಂಧಿಗಳನ್ನು ಸಂಕಷ್ಟಕ್ಕೆ ದೂಡಲಾಗಿದೆ. ಆಯಾ ನಿಗಮದಲ್ಲಿನ ಹಣವನ್ನು ಹೊಂದಾಣಿಕೆ ಮಾಡಿಕೊಂಡು ನಿಗಮಗಳನ್ನು ನಡೆಸುವ ಹಂತ ತಲುಪಲಾಗಿದೆ. ಇಂದಿಗೂ 9000 ಕೋಟಿ ರೂ ಪಿಎಫ್ ಹಣವನ್ನು ತುಂಬದೆ ಬಾಕಿ ಉಳಿಸಿಕೊಂಡಿದೆ ಈ ಎಲ್ಲಾ ಸರಕಾರದ ಸಂಕಷ್ಟಗಳ ಮಧ್ಯೆ ಮುಖ್ಯ ಮಂತ್ರಿ ಬದಲಾವಣೆಯ ಕೂಗು ಜೋರಾಗಿ ಕೇಳಿ ಬರುತ್ತಿದೆ.
ರಾಜ್ಯವು ದಿವಾಳಿಯ ಹಂತ ತಲುಪಿದ್ದರೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಕುರ್ಚಿಯ ಗುದ್ದಾಟ ಶುರುವಾಗಿದ್ದು ಮುಂದಿನ ದಿನದಲ್ಲಿ ಮಹಾರಾಷ್ಟ್ರದ ಶಿಂಧೆ ರೀತಿಯಲ್ಲಿ ರಾಜ್ಯದಲ್ಲಿಯೂ ರಾಜಕಾರಣ ನಡೆಯಲಿದೆ ಇಂಥ ಸಂದರ್ಭ ಬಂದಲ್ಲಿ ರಾಷ್ಟ್ರ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.