ಬೆಂಗಳೂರು: ಮದರಸಾದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟ ಮಕ್ಕಳ ಪೋಷಕರಿಗೆ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಮದರಸಾದವರಿಂದ ಬೆದರಿಕೆ ಆರೋಪ ಕೇಳಿಬಂದಿದೆ. ಅನ್ವರ್ ಅಲಿ, ಹಸನ್ ಮುಸ್ಮಿಲ್ ವಿರುದ್ಧ ಜೀವ ಬೆದರಿಕೆ ಹಾಕಿದ ಆರೋಪ ಮಾಡಲಾಗಿದೆ. ಈ ಸಂಬಂಧ ಸಂತ್ರಸ್ತರ ಬಾಲಕಿಯ ತಾಯಿ ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿಯ ತಾಯಿ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಯಶವಂತಪುರ ಠಾಣೆ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ. ಹಸನ್ ಎಂಬಾತ ಕೆಲ ದಿನಗಳ ಹಿಂದೆ ಮದರಸಾದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ಆರೋಪಿ ಹಸನ್ನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಮದರಸಾವನ್ನು ಪೊಲೀಸರು ಬಂದ್ ಮಾಡಿಸಿದ್ದರು.
ಕೇಂದ್ರ ಮಹಿಳಾ ಆಯೋಗದ ಕಮಿಟಿ ಸದಸ್ಯರು ಕೂಡ ಮದರಸಾಗೆ ಭೇಟಿ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ, ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಬಾಲಕಿಯ ತಾಯಿಗೆ ಬೆದರಿಕೆ ಹಾಕಲಾಗಿದೆ. ದೂರುದಾರರ ಪರ ವಕೀಲ ಹುಸೇನ್ಗೂ ಬೆದರಿಕೆ ಹಾಕಿದ ಆರೋಪ ವ್ಯಕ್ತವಾಗಿದೆ. ವಕೀಲ ಹುಸೇನ್ ನಾಲಗೆ ಕಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸಂತ್ರಸ್ತೆ ಬಾಲಕಿಯ ತಾಯಿ ಆಗ್ರಹಿಸಿದ್ದಾರೆ.