ನಾವು ದಿನನಿತ್ಯ ಅಡುಗೆಮನೆಯಲ್ಲಿ ಬಳಸುವ ಸ್ಪಾಂಜ್ ಟಾಯ್ಲೆಟ್ಗಿಂತ ಹೆಚ್ಚು ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಒಂದು ಸ್ಪಾಂಜ್ ಒಂದು ಘನ ಸೆಂಟಿಮೀಟರ್ಗೆ 54 ಬಿಲಿಯನ್ ಬ್ಯಾಕ್ಟೀರಿಯಾಗಳನ್ನು ಹೊಂದಿರಬಹುದು. ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್ನ ಮೇಲ್ಭಾಗವು ಕೊಳೆಯಾದಾಗ ಸುಲಭವಾಗಿ ತೆಗೆಯುವುದಿಲ್ಲ.
ಪ್ರತಿಯೊಂದು ಪಾತ್ರೆ, ಗ್ಯಾಸ್ಸ್ಟೌವ್ ಕ್ಲೀನ್ ಮಾಡಲು ಸ್ಪಾಂಜ್ ಬಳಸುತ್ತೇವೆ. ಆದರೆ ನಿಮಗೆ ಗೊತ್ತಾ ಒಂದೇ ಸ್ಪಾಂಜ್ ಅಥವಾ ಸ್ಕ್ರಬ್ನ್ನು ಬಹಳ ದಿನಗಳ ಕಾಲ ಬಳಸಿದ್ರೆ ಅದು ಅಪಾಯಕಾರಿ ಕಾಯಿಲೆಗೆ ಕಾರಣವಾಗುತ್ತಂತೆ.
2017 ರಲ್ಲಿ, ಜರ್ಮನಿಯ ಫರ್ಟ್ವಾಂಗೆನ್ ವಿಶ್ವವಿದ್ಯಾಲಯದಲ್ಲಿ ಸ್ಪಂಜುಗಳು ಮತ್ತು ಸ್ಕ್ರಬ್ಗಳ ಕುರಿತು ಅಧ್ಯಯನವನ್ನು ನಡೆಸಲಾಯಿತು. ಅದರ ಪ್ರಕಾರ, ನಮ್ಮ ಅಡುಗೆಮನೆಯ ಸ್ಕ್ರಬ್ಗಳು ಮತ್ತು ಸ್ಪಂಜುಗಳು ಟಾಯ್ಲೆಟ್ ಸೀಟ್ಗಿಂತ ಹೆಚ್ಚಿನ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ ಹಾಗಾಗಿ ಇದು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಬಹಿರಂಗಪಡಿಸಿದೆ. ನೀವು ಆ ಪಾತ್ರೆ ತೊಳೆಯುವ ಸ್ಕ್ರಬ್ಗಳನ್ನು ನೀವು ಸರಿಯಾದ ಸಮಯಕ್ಕೆ ಬದಲಾಯಿಸದಿದ್ದರೆ, ನೀವು ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸುತ್ತಿದ್ದೀರಿ ಎಂದರ್ಥ
ಹೆಚ್ಚಿನ ಮನೆಗಳಲ್ಲಿ ಸ್ಪಾಂಜ್ ಅಥವಾ ಸ್ಕ್ರಬ್ ಅನ್ನು ದಿನಕ್ಕೆ ಕನಿಷ್ಠ 3-4 ಬಾರಿ ಬಳಸಲಾಗುತ್ತದೆ. ಇದರಿಂದಾಗಿ ಅದು ಒಣಗಲು ಸಮಯ ಸಿಗುವುದಿಲ್ಲ ಮತ್ತು ಒದ್ದೆಯಾಗಿರುತ್ತದೆ. ತೇವಾಂಶದಿಂದಾಗಿ, ಹಾನಿಕಾರಕ ಬ್ಯಾಕ್ಟೀರಿಯಾಗಳು ಅದರಲ್ಲಿ ಬೆಳೆಯಲಾರಂಭಿಸುತ್ತವೆ. ಸಣ್ಣ ಆಹಾರ ಕಣಗಳು ಸ್ಪಾಂಜ್ ಅಥವಾ ಸ್ಕ್ರಬ್ನ ಒಳಭಾಗಗಳಲ್ಲಿ ದೀರ್ಘಕಾಲ ಸಿಲುಕಿಕೊಂಡಾಗ, ಈ ಬ್ಯಾಕ್ಟೀರಿಯಾಗಳ ಅಪಾಯವು ಹೆಚ್ಚಾಗುತ್ತದೆ.
ಸ್ಪಾಂಜ್-ಸ್ಕ್ರಬ್ನಲ್ಲಿರುವ ಸಾಲ್ಮೊನೆಲ್ಲಾ, ಇ. ಕೋಲಿ ಅಥವಾ ಸ್ಟ್ಯಾಫಿಲೋಕೊಕಸ್ನಂತಹ ಬ್ಯಾಕ್ಟೀರಿಯಾಗಳು ಆಹಾರ ವಿಷದ ಅಪಾಯವನ್ನು ಹೆಚ್ಚಿಸುತ್ತವೆ.
ವಾಂತಿ, ಅತಿಸಾರ ಅಥವಾ ಹೊಟ್ಟೆಯ ಸಮಸ್ಯೆಗಳು ಕಾಡಬಹುದು.
ಕೊಳಕು ಸ್ಪಂಜನ್ನು ಮುಟ್ಟುವುದರಿಂದ ಚರ್ಮದ ಕಿರಿಕಿರಿ, ದದ್ದುಗಳು ಅಥವಾ ಶಿಲೀಂಧ್ರಗಳ ಸೋಂಕು ಉಂಟಾಗಬಹುದು.
ಜ್ವರ ಬರಬಹುದು.
ಉಸಿರಾಟದ ತೊಂದರೆಗಳು ಕಾಡಬಹುದು.
ಬ್ಯಾಕ್ಟೀರಿಯಾಗಳು ಬರದಂತೆ ತಡೆಯಲು ಅಡುಗೆಮನೆಯ ಸ್ಪಂಜುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಇದನ್ನು ಅಡುಗೆಮನೆಯಲ್ಲಿ ತೇವಾಂಶವುಳ್ಳ ಸ್ಥಳಗಳಿಂದ ದೂರವಿಡಬೇಕು. ಸ್ಪಂಜನ್ನು ಒಣಗಿಸುವುದರಿಂದ ಅದರ ಮೇಲಿರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಬಹುದು.
ತಜ್ಞರ ಪ್ರಕಾರ, ಅಡುಗೆಮನೆಯ ಸ್ಪಾಂಜ್ ಅನ್ನು ಪ್ರತಿ ಎರಡರಿಂದ ಮೂರು ವಾರಗಳಿಗೊಮ್ಮೆ ಬದಲಾಯಿಸಬೇಕು. ಇದು ನಿಮ್ಮ ಅಡುಗೆಮನೆಯಲ್ಲಿ ಎಷ್ಟು ಸಮಯದವರೆಗೆ ಬಳಸಲ್ಪಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ನೀವು ಬಳಸಿದ ಸ್ಪಾಂಜ್ ಸರಿಯಾಗಿ ಒಣಗುವಂತೆ ನೋಡಿಕೊಳ್ಳಬೇಕು.