ಹುಬ್ಬಳ್ಳಿ: ಮಹಿಳೆ ಇಂದು ಅಬಲೆ ಅಲ್ಲ ಅವಳು ಸಬಲೆ, ಆದರೆ ಸಮಾಜದಲ್ಲಿ ಮಹಿಳೆಯನ್ನು ನಿರ್ವಹಿಸಿಕೊಳ್ಳುವಂತಹ ಮನಸ್ಥಿತಿಗಳು ಬೇಕು ಎಂದು ಕೆ.ಎಂ ಸಿ ಹುಬ್ಬಳ್ಳಿಯ ಸಹ ಪ್ರಾಧ್ಯಾಪಕರಾದ ಡಾ. ಅಶ್ವಿನಿ ಎಚ್ ಆರ್. ಹೇಳಿದರು.
ನಗರದ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಶಿಕ್ಷಣ ಮಹಾವಿದ್ಯಾಲಯದ ಬಿಎಡ್ ಸಭಾಂಗಣದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಶನಿವಾರ ಹಮ್ಮಿಕೊಳ್ಳಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅವರು ಮಾತನಾಡಿದರು.
ಪ್ರಶಿಕ್ಷಣಾರ್ಥಿಗಳು ನೀವು ಮುಂದಿನ ದಿನಗಳಲ್ಲಿ ಆರ್ಥಿಕತೆಯಲ್ಲಿ ಸ್ವಾವಲಂಬಿಗಳಾಗಿ ಎಂದು ಕರೆ ಕೊಟ್ಟರು.
ವಿದೇಶದ ಆರ್ಥಿಕತೆಗೆ ಮಹಿಳೆ ಬೇಕು, ಸರ್ಕಾರಿ ಕಚೇರಿಗಳಲ್ಲಿ ಹಲವಾರು ಅವಕಾಶಗಳಿದ್ದು ಇಂದು ಮಹಿಳೆಯರು ಎಲ್ಲಾ ರೀತಿಯ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುತ್ತಿರುವದರಿಂದ ದೇಶದ ಆರ್ಥಿಕತೆಗೆ ಮಹಿಳೆಯು ಭಾಗಿಯಾಗಿದ್ದಾಳೆ ಎಂದು ಹೆಮ್ಮೆ ಪಟ್ಟರು.
ರಾಣಿ ಅಬ್ಬಕ್ಕ, ಚನ್ನ ಭೈರಾದೇವಿ, ಜಾನ್ಸಿ ಲಕ್ಷ್ಮಿಬಾಯಿ ಮತ್ತು ಓಬವ್ವಾನಂತೆ ನೀವು ಸಮಾಜಮುಖಿಯಾಗಿ ಬಾಳಬೇಕು ಮತ್ತು ರಾಣಿ ಅಹಲ್ಯಾಬಾಯಿ ಹೋಳ್ಕರ್ ಕಥೆಗಳನ್ನು ಓದಿ ತಿಳಿಯಬೇಕು ಎಂದರು.
ಮನಸ್ಸಂತೆ ಮಹಾದೇವ ಎಂಬಂತೆ ನಾವು ನಮಗೆ ಬೇಕಾದ್ದನ್ನು ತಿಳಿದುಕೊಳ್ಳಬೇಕು, ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ನಾವು ಓದುವ ಪುಸ್ತಕಗಳಲ್ಲಿ ಚಾರಿತ್ರ್ಯ ಗಳಿರಬೇಕು ಅಂತಹ ಪಾತ್ರಗಳನ್ನು ಅವುಗಳ ಕುರಿತು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.
3000 ಸ್ತಿಚಸ್ ಎಂಬ ಸುಧಾಮೂರ್ತಿ ಅವರ ಕಥೆಗಳು ಇಂದಿನ ನಮ್ಮ ಮಹಿಳಾ ಪ್ರಪಂಚಕ್ಕೆ ದೊಡ್ಡ ಕೊಡುಗೆ ಎಂದು ಹೇಳಿದರು. ಮಹಿಳೆಯರು ಇಂದು ಮುಂದೆ ಬಂದಿದ್ದಾರೆ ಎಂದರೆ ಅದಕ್ಕೆ ಹಿನ್ನೆಲೆಯಾಗಿ ಪುರುಷರ ಪಾತ್ರ ಹೆಚ್ಚಿನದಾಗಿದೆ.. ನಾನು ಮೇಲು ನೀನು ಮೇಲು ಎನ್ನುವ ಬದಲು ಗಂಡ ಹೆಂಡತಿ ಈರ್ವರು ಸಮಾನರು ಎಂಬ ಭಾವ ಪ್ರತಿಯೊಬ್ಬರಲ್ಲೂ ಬರಬೇಕು ಅಂದಾಗ ಮಾತ್ರ ಸಮಾಜ ಬದಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನಕದಾಸ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ರವೀಂದ್ರನಾಥ್ ದಂಡಿನ್ ಮಾತನಾಡುತ್ತಾ, ದೇಶದಲ್ಲಿ, ಭಾರತದ ಸಂಸ್ಕೃತಿಯಲ್ಲಿ ತಾಯಂದಿರಿಗೆ, ಮಹಿಳೆಯರಿಗೆ ಪೂಜ್ಯ ಸ್ಥಾನ ನೀಡಿರುವಂತದ್ದು ಹೆಮ್ಮೆಯ ಸಂಗತಿ ಎಂದರು. ಇಂದು ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಸಮಾಜಮುಖಿಯಾಗಿ ಮುಂದೆ ಬಂದಿದ್ದಾರೆ ಎಂದು ಹೇಳಿದರು.
ಒಬ್ಬತಾಯಿ ನೂರು ಜನ ಶಾಲಾ ಶಿಕ್ಷಕಿಯರಿಗಿಂತ ದೊಡ್ಡವಳು, ದೌರ್ಜನ್ಯಗಳು ಎಲ್ಲಿ ಆಗುತ್ತಿವೆ ಅಲ್ಲಿ ತಾಯಂದಿರ ಶಿಕ್ಷಣದ ಕೊರತೆಯಾಗಿರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ಪಾಶ್ಚಿಮಾತ್ಯ ಅನುಕರಣೆಯಿಂದ ನಮ್ಮನ್ನ ನಾವು ಕಡಿಮೆ ಮಾಡಿಕೊಳ್ಳಬಾರದು. ಎಲ್ಲಿ ಅವಶ್ಯಕತೆ ಇದೆ ಅಲ್ಲಿ ಬದಲಾವಣೆ ಇರಲಿ, ನಾವೇ ಕಾಣೆಯಾಗುವ ರೀತಿಯಲ್ಲಿ ನಾವು ಇಂದು ಬದಲಾಗಬಾರದು ಎಂದರು, ಇಂದು ಕೆಲವು ದೇಶಗಳಲ್ಲಿ ಸಂಸ್ಕೃತಿಯೇ ಇಲ್ಲ, ಆದರೆ ನಮ್ಮ ಭಾರತದ ಸಂಸ್ಕೃತಿ ಆಚಾರ ವಿಚಾರಗಳಿಗೆ ನಾವು ಗೌರವವನ್ನು ಕೊಟ್ಟು ಅದನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಾವುಗಳು ಸಾಗಬೇಕಿದೆ ಎಂದು ತಿಳಿ ಹೇಳಿದರು.
ಮಹಾಭಾರತ, ರಾಮಾಯಣಗಳಂತಹ ಕಥೆಗಳನ್ನು ಆಭ್ಯಷಿಸಿದಾಗ ನಾವು ಮೌಲ್ಯಗಳಾದಾರಿತವಾಗಿ ನಾವು ಹೇಗೆ ಬದುಕಬೇಕು ಎಂಬುದನ್ನು ತಿಳಿಯಬೇಕು ಎಂದರು. ನಾವೆಲ್ಲರೂ ಜೇನಿನಂತೆ ಆಗಿ ಸಮಾಜದಲ್ಲಿ ಬದುಕೋಣ ಎಂದು ಹೇಳಿದರು.
ಪ್ರಶಿಕ್ಷಣಾರ್ಥಿನಿಯಾದ ರಾಜಶ್ರೀ ಮತ್ತು ಪ್ರಶಿಕ್ಷಣಾರ್ಥಿ ಶಶಿಕಾಂತ್ ಅನಿಸಿಕೆ ನುಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಶ್ರೀಮತಿ ಎನ್ ಡಿ ಶೇಖ್, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಡಾ. ಎಂ ಆರ್ ಭಟ್, ಡಾ.ಎ.ಜೆ ಪಾಟೀಲ್, ಪಿ.ಯು ಪ್ರಾಚಾರ್ಯ ಪ್ರೊ. ಸಂದೀಪ್ ಬೂದಿಹಾಳ, ಡಾ. ಹೆಚ್ ವಿ ಬೆಳಗಲಿ, ಡಾ. ರಾಜಕುಮಾರ್ ಪಾಟೀಲ್, ಡಾ ಪಿ.ಎಸ್ ಹೆಗಡಿ, ಡಾ ಎಂ ಪಿ ಚಳಗೇರಿ, ಡಾ. ಎನ್ ಎಸ್ ಬಸನಾಳ್, ದೈಹಿಕ ನಿರ್ದೇಶಕರಾದ ಪ್ರೊ ಎಚ್ ಆರ್ ಕುರಿ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ ನೂರಾರು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಡಾ. ಜೆ.ಸಿ ಹಿರೇಮಠ್ ಪ್ರಾಸ್ತಾವಿಕ ನುಡಿ ನುಡಿದರು. ಪ್ರಶಿಕ್ಷಣಾರ್ಥಿಗಳಾದ ಸಹನಾ ಮತ್ತು ಲಕ್ಷ್ಮಿ ಪವಾರ್ ಸ್ವಾಗತ ಗೀತೆ ಹೇಳಿದರು. ಪ್ರಶಿಕ್ಷಣಾರ್ಥಿ ವಿಕಾಸ್ ಸ್ವಾಗತಿಸಿ ಪರಿಚಯಿಸಿದರು. ಪ್ರಶಿಕ್ಷಣಾರ್ಥಿನಿಯಾದ ವಿಶಾಲ ಎನ್ ನಿರೂಪಿಸಿದರು. ಅಮೃತ ವಂದಿಸಿದರು.