ಮಾರ್ಚ್ 8, ಅಂತರರಾಷ್ಟ್ರೀಯ ಮಹಿಳೆಯರ ದಿನ. ಈ ವಿಶಿಷ್ಟ ದಿನವನ್ನು “ಜಸ್ಟ್ ಮ್ಯಾರೀಡ್” ಚಿತ್ರದಲ್ಲಿ ನಟಿಸಿರುವ ಮಹಿಳಾ ನಟಿಯರು ನಿರ್ದೇಶಕಿ ಸಿ.ಆರ್ ಬಾಬಿ ಅವರ ಸಾರಥ್ಯದಲ್ಲಿ ವಿಭಿನ್ನವಾಗಿ ಆಚರಿಸಿದ್ದಾರೆ. ಚಿತ್ರದ ನಾಯಕಿ ಅಂಕಿತ ಅಮರ್, ನಟಿಯರಾದ ಶೃತಿ ಕೃಷ್ಣ, ಮಾಳವಿಕ ಅವಿನಾಶ್, ಶೃತಿ ಹರಿಹರನ್, ವಾಣಿ ಹರಿಕೃಷ್ಣ ಹಾಗೂ ನಿರ್ದೇಶಕಿ ಬಾಬಿ ಕೇಕ್ ಕಟ್ ಮಾಡುವ ಮೂಲಕ ವಿಶ್ವ ಮಹಿಳೆಯರ ದಿನವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ನಟಿಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ನಾನು ಬಹಳ ವರ್ಷಗಳ ನಂತರ ಮಹಿಳೆಯೊಬ್ಬರು ನಿರ್ದೇಶಿಸಿರುವ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಮಾತನಾಡಿದ ನಟಿ ಶೃತಿ ಕೃಷ್ಣ, ಈ ಚಿತ್ರದಲ್ಲಿ ನಾನು ಮೊದಲ ದಿವಸದ ಚಿತ್ರೀಕರಣದಲ್ಲಿ ಪಾಲ್ಗೊಂಡಾಗಲೇ ಬಾಬಿ ಅವರ ಕಾರ್ಯವೈಖರಿ ಕಂಡು ಬೆರಗಾದೆ. ಕೆಲಸದಲ್ಲಿ ಅವರಿಗಿರುವ ನಿಷ್ಠೆ ನಿಜಕ್ಕೂ ಅಭಿನಂದನಾರ್ಹ. ಇನ್ನೂ ಈ ತಂಡದ ಜೊತೆಗೆ ಅಭಿನಯಿಸಿದ್ದು ಖುಷಿಯಾಗಿದೆ. ಅಜನೀಶ್ ಅವರ ನಿರ್ಮಾಣದ ಈ ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಚಿತ್ರರಂಗದ ತಂತ್ರಜ್ಞಾನ ವಿಭಾಗದಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸುವುದು ತುಂಬಾ ಕಡಿಮೆ. ಆ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಸಂಗೀತ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಸಿ.ಆರ್.ಬಾಬಿ ಇದೇ ಮೊದಲ ಬಾರಿಗೆ “ಜಸ್ಟ್ ಮ್ಯಾರೀಡ್” ಚಿತ್ರದ ಮೂಲಕ ನಿರ್ದೇಶಕಿಯಾಗಿದ್ದಾರೆ. ಆದರೆ ನಾನು ಚಿತ್ರೀಕರಣದಲ್ಲಿ ಪಾಲ್ಗೊಂಡಾಗ ಒಂದು ದಿನವೂ ಇದು ಬಾಬಿ ಅವರ ಮೊದಲ ನಿರ್ದೇಶನದ ಚಿತ್ರ ಅನಿಸಲೇ ಇಲ್ಲ. ಅಷ್ಟು ಅಚ್ಚುಕಟ್ಟಾಗಿತ್ತು ಅವರ ಕಾರ್ಯವೈಖರಿ. ನಾನು ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದು ಸಿ.ಆರ್.ಬಾಬಿ ಅವರಿಗಾಗಿ. ಅದರಲ್ಲೂ ಒಬ್ಬ ಮಹಿಳೆ ನಿರ್ದೇಶಿಸುತ್ತಿರುವ ಚಿತ್ರ ಎಂಬ ಕಾರಣಕ್ಕಾಗಿ. ಇನ್ನೂ ಈ ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ಅಜನೀಶ್ ಲೋಕನಾಥ್ ನಿರ್ಮಾಣ ಮಾಡಿದ್ದಾರೆ. “ಜಸ್ಟ್ ಮ್ಯಾರೀಡ್” ಚಿತ್ರ ಭರ್ಜರಿ ಹಿಟ್ ಆಗಲಿ ಎಂದು ನಟಿ ಮಾಳವಿಕ ಅವಿನಾಶ್ ಹಾರೈಸಿದರು.
ನನಗೆ ಬಾಬಿ ಅವರು ಬಹಳ ದಿನಗಳ ಪರಿಚಯ. ಅವರು “ಜಸ್ಟ್ ಮ್ಯಾರೀಡ್” ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ವಿಷಯ ತಿಳಿದು ಬಹಳ ಖುಷಿಯಾಯಿತು. ಒಂದು ದಿನ ಅವರು ಫೋನ್ ಮಾಡಿ ನೀವು ಈ ಚಿತ್ರದಲ್ಲಿ ನಟಿಸಬೇಕೆಂದರು. ನನಗೆ ಹಾಡುವುದು ಸುಲಭ. ಆದರೆ ನಟನೆ ಹೊಸತು. ಬಾಬಿ ಅವರು ನನಗೆ ಚಿತ್ರೀಕರಣಕ್ಕೂ ಮುನ್ನ ತರಭೇತಿ ನೀಡಿದ್ದರು. ಅದರಿಂದ ನನಗೆ ಅಭಿನಯಿಸಲು ಅನುಕೂಲವಾಯಿತು. ಈ ಚಿತ್ರದಲ್ಲಿ ಸಾಕಷ್ಟು ಜನ ಹಿರಿಯ ಹಾಗೂ ಕಿರಿಯ ಕಲಾವಿದರು ನಟಿಸಿದ್ದಾರೆ. ಅವರೆಲ್ಲರ ಜೊತೆಗೆ ನಟಿಸಿದ್ದು ಬಹಳ ಖುಷಿಯಾಗಿದೆ ಎನ್ನುತ್ತಾರೆ ವಾಣಿ ಹರಿಕೃಷ್ಣ.
ನಾಯಕಿ ಅಂಕಿತ ಅಮರ್ ಹಾಗೂ ನಟಿ ಶೃತಿ ಹರಿಹರನ್ ಕೂಡ “ಜಸ್ಟ್ ಮ್ಯಾರೀಡ್” ಚಿತ್ರದಲ್ಲಿ ನಟಿಸಿದ್ದು ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ಮಹಿಳಾ ದಿನಾಚರಣೆ ಸಂದರ್ಭದಲ್ಲಿ ನಿರ್ದೇಶಕಿ ಬಾಬಿ ಅವರಿಗೆ ಹಾಗೂ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದೆಯರಿಗೆ ಶುಭಾಶಯ ತಿಳಿಸಿದ್ದಾರೆ.
ನನ್ನ ನಿರ್ದೇಶನದ ‘ಜಸ್ಟ್ ಮ್ಯಾರಿಡ್’ ಚಿತ್ರದಲ್ಲಿ ಲೆಜೆಂಡರಿ ಕಲಾವಿದೆ ಶೃತಿ ಕೃಷ್ಣ ರವರು ಅಭಿನಯಿಸಿದ್ದು ನನಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಹಾಗೂ ಮಾಳವಿಕ ಅವಿನಾಶ್ ರವರು ಈ ಚಿತ್ರದಲ್ಲಿ ಒಂದು ಮಹತ್ವದ ಪಾತ್ರದಲ್ಲಿ ಅಭಿನಯಿಸಿ, ಈ ಚಿತ್ರದ ಒಂದು ತೂಕವನ್ನೇ ಹೆಚ್ಚಿಸಿದ್ದಾರೆ. ಶೃತಿ ಹರಿಹರನ್ ಕೂಡ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮನಸ್ಸನ್ನು ಸೂರೆಗೊಳ್ಳಲಿದ್ದಾರೆ. ಗಾಯಕಿ ವಾಣಿ ಹರಿಕೃಷ್ಣರವರು ನಟಿಸಿರುವ ಪಾತ್ರ ಎಲ್ಲರ ಮುಖದಲ್ಲೂ ನಗು ತರಿಸುವಂತಹ ಪಾತ್ರವಾಗಿದೆ. ನಾಯಕನಟಿ ಅಂಕಿತ ಅಮರ್ ಅವರದು ಸಮಕಾಲಿನ ಹುಡುಗಿಯರನ್ನು ಪ್ರತಿಬಿಂಬಿಸುವ ಪಾತ್ರವಾಗಿದೆ ಎಂದು ನಿರ್ದೇಶಕಿ ಸಿ ಆರ್ ಬಾಬಿಯವರು ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ.
abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ನಿರ್ಮಿಸಿರುವ, ಸಿ.ಆರ್.ಬಾಬಿ ಅವರ ನಿರ್ದೇಶನದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಜಸ್ಟ್ ಮ್ಯಾರೀಡ್” ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ