ಹುಬ್ಬಳ್ಳಿ: ನಕಲಿ ಮದ್ಯ ತಯಾರಿಕೆ ಮಾಡುತ್ತಿದ್ದ ತೋಟದ ಮನೆಯೊಂದರ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಛಬ್ಬಿ ಗ್ರಾಮದ ಬಳಿಯ ತೋಟದ ಮನೆಯಲ್ಲಿ ಇಬ್ಬರು ನಕಲಿ ಮದ್ಯ ತಯಾರಿಸುತ್ತಿದ್ದು, ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಕಲಿ ಮದ್ಯ ಹಾಗೂ ಇತರ ವಸ್ತುಗಳು ವಶಕ್ಕೆ ಪಡೆದಿದ್ದಾರೆ.
ಇನ್ನೂ ಈ ಬಗ್ಗೆ ಧಾರವಾಡ ಅಬಕಾರಿ ಉಪ ಆಯುಕ್ತ ರಮೇಶ್ ಕುಮಾರ್ ಮಾಹಿತಿ ನೀಡಿದ್ದು, ಬೆಳಗಾವಿ ಅಧೀಕ್ಷಕರು, ಹುಬ್ಬಳ್ಳಿ ಅಬಕಾರಿ ತಂಡದಿಂದ ದಾಳಿ ಮಾಡಲಾಗಿದೆ. ಹುಬ್ಬಳ್ಳಿಯ ಛಬ್ಬಿಗ್ರಾಮದಿಂದ ಬೊಮ್ಮಸಂದ್ರ ಗ್ರಾಮದ ಮಾರ್ಗದ ತೋಟದ ಮನೆಯಲ್ಲಿ ನಕಲಿ ಮದ್ಯ ತಯಾರಿಸಲಾಗುತ್ತಿತ್ತು. ನಕಲಿ ಮದ್ಯ ತಯಾರು ಮಾಡುತ್ತಿದ್ದ ಇಬ್ಬರನ್ನ ನಾವು ಬಂಧನ ಮಾಡಿದ್ದೇವೆ. ನಕಲಿ ಲೇಬಲ್, ಭದ್ರತಾ ಚೀಟಿ ಸೇರಿ ಹಲವು ವಸ್ತುಗಳನ್ನ ಜಪ್ತಿ ಮಾಡಲಾಗಿದೆ ಎಂದರು.
ಅಬಕಾರಿ ಅಪರ ಆಯುಕ್ತ ಅಧಿಕಾರಿ ಮಂಜುನಾಥ್ ಹಾಗೂ ಬೆಳಗಾವಿ ಜೆಸಿ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ದಾಳಿ ಮಾಡಿದಾಗ ಇಬ್ಬರು ಯುವಕರು ನಕಲಿ ಮದ್ಯ ತಯಾರು ಮಾಡುತ್ತಿದ್ದರು. ಇದರಲ್ಲಿ ಸರ್ಕಾರಿ ಮಾನ್ಯತೆ ಪಡೆದದ್ದು ಯಾವುದು ಇರಲಿಲ್ಲ. ಹೀಗಾಗಿ ಇಬ್ಬರ ಮೇಲೆ ಮೊಕದ್ದಮೆ ದಾಖಲು ಮಾಡಿದ್ದೇವೆ. 5 ಲಕ್ಷ ಮೌಲ್ಯದ ಮದ್ಯ ಹಾಗೂ ವಸ್ತುಗಳನ್ನ ವಶಕ್ಕೆ ಪಡೆದಿದ್ದೇವೆ. ಹುಬ್ಬಳ್ಳಿ ಮೂಲದ ಸಂದೀಪ್ ಹಾಗೂ ಅಮೃತ ಎಂಬ ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ನೊಬ್ಬ ಆರೋಪಿಗಾಗಿ ಹುಡುಕ್ತಾ ಇದ್ದೇವೆ ಎಂದಿದ್ದಾರೆ. ಈ ಆರೋಪಿಗಳು ಗೊಬ್ಬರ ಅಂಗಡಿ ಇಡೋದಾಗಿ ಸುಳ್ಳು ಹೇಳಿ ಮನೆ ಬಾಡಿಗೆಗೆ ಪಡೆದು ನಕಲಿ ಮದ್ಯ ತಯಾರಿಸುತ್ತಿದ್ದರು ಎನ್ನಲಾಗಿದೆ.