ಶಿವಮೊಗ್ಗ: ರೈತರ ಹಕ್ಕುಪತ್ರ ವಜಾಕ್ಕೆ ನೋಟೀಸ್ ನೀಡಿರುವುದನ್ನು ವಾಪಸ್ಸು ಪಡೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ 50-60 ವರ್ಷಗಳ ಹಿಂದೆ ಹಾಗೂ ಇತ್ತೀಚಿನ ವರ್ಷಗಳಲ್ಲಿ ರೈತರಿಗೆ ಕೊಟ್ಟಿರುವ ಜಮೀನಿನ ಹಕ್ಕುಪತ್ರಗಳನ್ನು ವಜಾ ಮಾಡಲು ಎಸಿ ಕಚೇರಿಯ ಮೂಲಕ ಕಡೇಕಲ್, ಉಂಬಳೇಬೈಲು ಪಂಚಾಯ್ತಿ, ಲಕ್ಕಿನಕೊಪ್ಪ (ಕೊರಲಹಳ್ಳಿ), ಹಾಲಕ್ಕವಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ 600 ಕ್ಕೂ ಹೆಚ್ಚು ನೋಟಿಸ್ ನೀಡಿ ರೈತರಿಗೆ ಅಲೆದಾಡಿಸುತ್ತಿದ್ದಾರೆ. ಅರಣ್ಯ ಇಲಾಖೆ ಸಿಸಿಎಫ್ ಕಚೇರಿಯಿಂದಲೂ ನೋಟಿಸ್ ಕೊಡಲಾಗಿದೆ. 600 ಕ್ಕೂ ಹೆಚ್ಚು ರೈತರಿಗೆ ನೋಟೀಸ್ ನೋಡಿದ್ದಾರೆ. ಕಂದಾಯ ಇಲಾಖೆ ಕೊಟ್ಟಿರುವ ಹಕ್ಕುಪತ್ರಗಳನ್ನು ವಜಾ ಮಾಡಿ ಎಂದು ಅರಣ್ಯ ಇಲಾಖೆ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದೆ.
ರೈತರು ಕಾನೂನು ಬಾಹಿರವಾಗಿ ಭೂ ಮಂಜೂರಾತಿ ಪಡೆದುಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಪಾಧಿಸಿದೆ. ಇದು ಖಂಡನೀಯವಾಗಿದ್ದು, ಸರ್ಕಾರವಾಗಲಿ, ಮಂತ್ರಿಗಳಾಗಲಿ ಇದನ್ನು ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ಕೋರ್ಟ್ ಆದೇಶ ಇದು ನಾವೇನು ಮಾಡಲು ಆಗುವುದಿಲ್ಲ ಎಂದು ಕೈ ತೊಳೆದು ಕೂತಿದ್ದಾರೆ. ಅಧಿವೇಶನದಲ್ಲಿ ಜಿಲ್ಲೆಯ ರೈತರಿಗೆ ಸರ್ಕಾರ ಹಕ್ಕುಪತ್ರ ನೀಡಿರುವುದನ್ನು ವಜಾ ಮಾಡದಂತೆ ಆಗ್ರಹಿಸಬೇಕು. ಅರಣ್ಯ ಹಕ್ಕು ಕಾಯ್ದೆ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ರೈತರಿಗೆ ಭೂ ಮಂಜೂರಾತಿ ಮಾಡಲು ಕ್ರಮ ಕೈಗೊಳ್ಳಬೇಕು. ಯಾವುದೇ ಸರ್ಕಾರ ಇರಲಿ ಯಾವುದೇ ಜನಪ್ರತಿನಿಧಿ ಇರಲಿ ನಮ್ಮ ಪರ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.