ಧಾರವಾಡ : ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಶೇಖರಿಸಿಟ್ಟದ್ದ ಬಣವಿಗಳಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ನಾಶವಾಗಿದೆ.
ಲಕ್ಷ್ಮೇಶ್ವರ ರೋಡ್ ಹಳೆಬಾವಿ ಹತ್ತಿರ ಈ ಘಟನೆ ನಡೆದಿದ್ದು, ರೈತರಾದ ಮಲ್ಲಪ್ಪ ಭರಮಪ್ಪ ಪಾಣಿಗಟ್ಟಿ ಅವರ ಒಂದು ಬಳ್ಳಿ ಶೇಂಗಾದ ಹೊಟ್ಟಿನ ಬಣವಿ ಹಾಗೂ ಚನ್ನಪ್ಪ ನಡುವಿನಮನೆಯವರ ಒಂದು ಜೋಳದ ಸೊಪ್ಪಿನ ಮತ್ತು ಒಂದು ಹೊಟ್ಟಿನ ಒಟ್ಟು ಮೂರು ಬಣವಿಗಳಾಗಿದ್ದು, ಅಂದಾಜು 35 ರಿಂದ 40 ಸಾವಿರ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕುಂದಗೋಳ ಪಟ್ಟಣದ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರ ಸಹಾಯ ಪಡೆದು ಬೆಂಕಿ ನಂದಿಸಿದರು. ಅಕ್ಕ-ಪಕ್ಕದಲ್ಲಿ ಇನ್ನೂ ಸುಮಾರು 20 ರಿಂದ 25 ಬಣವಿಗಳು ಇದ್ದವು, ಮುಂದೆ ಆಗಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
ಈ ಸ್ಥಳದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಇದ್ದು ಇದರಲ್ಲಿ ಆಗಾಗ ವಿದ್ಯುತ್ ಶಾರ್ಟ್ ನಿಂದ ಕಿಡಿ ಹತ್ತಿಕೊಳ್ಳುತ್ತದೆ. ಇದರಿಂದ ಒಣಹುಲ್ಲಿನ ಮೇಲೆ ಬಿದ್ದ ಕಿಡಿಯಿಂದ ಈ ಅನಾಹುತ ಸಂಭವಿಸಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.