ಬೆಂಗಳೂರು:- ಟೂರಿಸ್ಟ್ ವಾಹನಗಳಿಗೆ RTO ಗುಡ್ ನ್ಯೂಸ್ ಕೊಟ್ಟಿದ್ದು, ಯೆಲ್ಲೋ ಬೋರ್ಡ್ ಮಾಲೀಕರು ಈ ಸುದ್ದಿ ನೋಡಲೇಬೇಕಾಗಿದೆ.
ಕಳೆದ ಹಲವು ವರ್ಷಗಳಿಂದ ಅಂತರರಾಜ್ಯ ಸಂಚಾರಕ್ಕೆ ಬೇಕಿದ್ದ ಸ್ಪೇಷಲ್ ಪರ್ಮಿಟ್ ವಿಚಾರವಾಗಿ, ಯೆಲ್ಲೋ ಬೋರ್ಡ್ ವಾಹನ ಮಾಲೀಕರಿಗೆ ಇದ್ದ ಕೆಲವು ನಿಯಮಗಳನ್ನ ಆರ್ಟಿಓ ಸರಳೀಕರಣ ಮಾಡಿದೆ.
ಪ್ರತಿದಿನ ಕರ್ನಾಟಕದಿಂದ ಬೇರೆ ಬೇರೆ ರಾಜ್ಯಗಳಿಗೆ ಟೂರಿಸ್ಟ್ ಸೇರಿದಂತೆ ವ್ಯವಹಾರಿಕ ಕಾರ್ಯಗಳಿಗೆ ಸಾವಿರಾರು ಯೆಲ್ಲೋ ಬೋರ್ಡ್ ವಾಹನಗಳು ಸಂಚಾರ ಮಾಡುತ್ತವೆ. ಅಂತರರಾಜ್ಯಕ್ಕೆ ತೆರಳುವ ಮುನ್ನ ಪ್ರತಿ ಬಾರಿಯೂ ಮಾಲೀಕ ಅಥವಾ ಚಾಲಕ ಯಾವುದೇ ಜಿಲ್ಲೆಯಲ್ಲಿದ್ದರೂ ವಾಹನದ ಮೂಲ ದಾಖಲಾತಿಯೊಂದಿಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ಬಂದು ದಾಖಲೆ ನೀಡಿ ಕಾದು ಸ್ಪೇಷಲ್ ಪರ್ಮಿಟ್ ಪಡೆದ ಬಳಿಕವಷ್ಟೇ ಬೇರೆ ರಾಜ್ಯಗಳ ಎಂಟ್ರಿಗೆ ಅವಕಾಶ ಸಿಗುತ್ತಿತ್ತು.
ಈ ಎಲ್ಲಾ ಪ್ರಕ್ರಿಯೆ ಮುಕ್ತಾಯಕ್ಕೆ ಸುಮಾರು ಎರಡು ಮೂರು ದಿನ ಸಮಯ ಬೇಕಾಗಿತ್ತು. ಸದ್ಯ ಈಗ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದ್ದು, ಇನ್ಮುಂದೆ ಬೆರಳ ತುದಿಯಲ್ಲಿ, ಸೆಕೆಂಡ್ ಗಳಲ್ಲೇ ಸ್ಪೆಷಲ್ ಪರ್ಮಿಟ್ ಸಿಗಲಿದೆ.
ರಾಜ್ಯದಿಂದ ಬೇರೆ ರಾಜ್ಯಗಳಿಗೆ ಸಂಚಾರ ಮಾಡುವ ಮುನ್ನ ರಾಜ್ಯ ಆರ್ಟಿಓನಿಂದ ವಿಶೇಷ ಅನುಮತಿ ಪಡೆಯಬೇಕು. ಅದರಂತೆ ಒಬ್ಬ ಮಾಲೀಕ ಅಥವಾ ಚಾಲಕ ಉದಾಹರಣೆಗೆ ದೂರದ ಬೆಳಗಾವಿಯಿಂದ ಪಕ್ಕದ ಮಹಾರಾಷ್ಟ್ರಕ್ಕೆ ಸಂಚಾರ ಮಾಡಬೇಕಿದ್ರು, ಬೆಂಗಳೂರಿನ ಕೇಂದ್ರ ಕಚೇರಿಯ ಕರ್ನಾಟಕ ಸಾರಿಗೆ ಅಥಾರಿಟಿಗೆ ಬಂದು ಕಾದು ಪರ್ಮಿಟ್ ಪಡೆದು, ಆ ಬಳಿಕ ರಾಜ್ಯ ಗಡಿ ದಾಟಬೇಕಿತ್ತು. ಜೊತೆಗೆ ಪರ್ಮಿಟ್ ನೀಡುವ ವಿಚಾರದಲ್ಲಿ ಕೆಲವು ಕಡೆ ಲಂಚ ಕೊಡಬೇಕೆಂಬ ಆರೋಪವೂ ಇತ್ತು. ಸದ್ಯ ಈಗ ಇವೆಲ್ಲದಕ್ಕೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ