ಬೆಂಗಳೂರು:-ಫುಡ್ ಡೆಲಿವರಿ ಮಾಡೋರಿಗೆ ಪೊಲೀಸ್ ಇಲಾಖೆ ಬಿಗ್ ಶಾಕ್ ಕೊಟ್ಟಿದ್ದು, ಯೆಲ್ಲೋ ಬೋರ್ಡ್ ಕಡ್ಡಾಯ ಎಂದು ಹೇಳಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಟ್ಟೆ ಪಾಡಿಗಾಗಿ ಬೈಕ್ಗಳ ಮೂಲಕ ಆಹಾರವನ್ನು ಮನೆ ಮನೆಗೆ ವಿತರಣೆ ಮಾಡುವ ಬಡ ಡೆಲಿವರಿ ಬಾಯ್ಗಳಿಗೆ ಬೆಂಗಳೂರು ನಗರ ಪೊಲೀಸರು ಶಾಕ್ ನೀಡಿದ್ದಾರೆ.
ಸ್ವಿಗ್ಗಿ, ಝೋಮ್ಯಾಟೋ ಸೇರಿದಂತೆ ಫುಡ್ ಡೆಲಿವರಿ ಬಾಯ್ಗಳ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಬೈಕ್ ಇಲ್ಲದೇ, ಅತ್ತ ಡೆಲಿವರಿ ಮಾಡಲಾಗದೇ ಅನೇಕ ಯುವಕರು ನಡು ರಸ್ತೆಯಲ್ಲಿ ನಿಲ್ಲುವಂತಾಗಿದೆ. ನಿಯಮಗಳ ಪ್ರಕಾರ ವೈಟ್ ಬೋರ್ಡ್ ವಾಹನ ಬಳಕೆ ಮಾಡುವಂತಿಲ್ಲ. ಬೆಂಗಳೂರಿನಲ್ಲಿ ವೈಟ್ ಬೋರ್ಡ್ ನಂಬರ್ ಪ್ಲೇಟ್ ಇರುವ ದ್ವಿಚಕ್ರ ವಾಹನಗಳಲ್ಲಿ ಸ್ವಿಗ್ಗಿ, ಝೊಮ್ಯಾಟೊ ಕಂಪನಿಗಳ ಅಡಿಯಲ್ಲಿ ಮನೆ ಮನೆಗೆ ಆಹಾರ ವಿತರಿಸುವ ಡೆಲಿವರಿ ಬಾಯ್ಗಳ ವಿರುದ್ಧ ಕ್ರಮ ಜರುಗಿಸಲಾಗಿದೆ.
ಅಧಿಕೃತ ಆದೇಶದ ಮೇರೆಗೆ ನಿಯಮ ಉಲ್ಲಂಘಿಸುವ ಡೆಲಿವರಿ ಬಾಯ್ಗಳ ಬೈಕ್ ಜಪ್ತಿ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೆಂಗಳೂರು ನಗರ ಸಂಚಾರಿ ಪೊಲೀಸರು, ಯಾರೆಲ್ಲ ವೈಟ್ ಬೋರ್ಡ್ ಹೊಂದಿರುವ ವಾಹನಗಳಲ್ಲಿ ಆಹಾರ ವಿತರಿಸುತ್ತಿದ್ದಾರೋ ಅಂತಹ ಡೆಲಿವರಿ ಬಾಯ್ಗಳ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ಹಿಂಬದಿ ಸೀಟಿನ ಮೇಲೆ ಕೆಂಪು ಝೊಮ್ಯಾಟೊ ಬ್ಯಾಗ್ ಇರುವ ನೂರಾರು ಬೈಕ್ಗಳು ಇದೀಗ ಪೊಲೀಸ್ ಸುಪರ್ದಿಯಲ್ಲಿವೆ. ಇತ್ತ ಫುಡ್ ಡೆಲಿವರಿ ವಿತರಣೆ ನೆಚ್ಚಿಕೊಂಡಿದ್ದ ಅದೆಷ್ಟೋ ಮಂದಿಗೆ ದಿಕ್ಕೇ ತೋಚದಂತಾಗಿದೆ. ಇನ್ನೂ ಕೆಲವರು ಇತರ ಉದ್ಯೋಗದ ಜೊತೆಗೆ ಸಿಕ್ಕ ಖಾಲಿ ಸಮಯದಲ್ಲಿ ಡೆಲಿವರಿ ಮಾಡುತ್ತಿದ್ದರು. ಅವರಿಗೂ ಪೊಲೀಸರು ಶಾಕ್ ನೀಡಿದ್ದಾರೆ.